ADVERTISEMENT

ದಾಖಲೆ ದೃಢೀಕರಿಸುವಂತೆ ಆಧಾರ್‌ ಪ್ರಾಧಿಕಾರದ ಪತ್ರ: ಗೊಂದಲ ಸೃಷ್ಟಿಸಿದ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:30 IST
Last Updated 19 ಫೆಬ್ರುವರಿ 2020, 19:30 IST
ಆಧಾರ್
ಆಧಾರ್   

ಹೈದರಾಬಾದ್‌:ಆಧಾರ್‌ ನೋಂದಣಿಗೆ ನೀಡಿದ ದಾಖಲೆಗಳನ್ನು ದೃಢೀಕರಿಸಿ ಎಂದು ಹೈದರಾಬಾದ್‌ನ 127 ಜನರಿಗೆ ನೋಟಿಸ್‌ ನೀಡಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ, ಆಧಾರ್‌ ಪ್ರಾಧಿಕಾರ) ತಿಳಿಸಿದೆ.

ಪೌರತ್ವ ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಿ ಎಂದು ಯುಐಡಿಎಐ ನೋಟಿಸ್‌ ನೀಡಿದೆ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ, ಪ್ರಾಧಿಕಾರವು ಸ್ಪಷ್ಟೀಕರಣ ನೀಡಿದೆ.

ಈ 127 ಮಂದಿ ನಕಲಿ ದಾಖಲೆ ನೀಡಿ ಆಧಾರ್‌ ಪಡೆದುಕೊಂಡಿದ್ದಾರೆ ಎಂದು ಪೊಲೀಸ್‌ ಇಲಾಖೆ ನೀಡಿದ ವರದಿಯ ಆಧಾರದಲ್ಲಿ ನೋಟಿಸ್‌ ನೀಡಲಾಗಿದೆ. ಇವರೆಲ್ಲರೂ ಅಕ್ರಮ ವಲಸಿಗರಾಗಿದ್ದು, ಆಧಾರ್‌ ಸಂಖ್ಯೆ ಪಡೆಯಲು ಅರ್ಹರಲ್ಲ ಎಂದು ಪೊಲೀಸ್‌ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಯುಐಡಿಎಐನ ಹೈದರಾಬಾದ್‌ ಪ್ರಾದೇಶಿಕ ಕಚೇರಿ ಹೇಳಿದೆ.

ADVERTISEMENT

ಈ ನೋಟಿಸ್‌ಗೂ ಪೌರತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಆಧಾರ್‌ ಸಂಖ್ಯೆಯನ್ನು ರದ್ದುಪಡಿಸುವುದು ವ್ಯಕ್ತಿಯ ಪೌರತ್ವದ ಜತೆಗೆ ಸಂಬಂಧ ಇರುವ ವಿಚಾರ ಅಲ್ಲ ಎಂದೂ ಪ್ರಾಧಿಕಾರವು ಸ್ಪಷ್ಟಪಡಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಂಬಂಧಿಸಿ ದೇಶದ ಒಂದು ವರ್ಗದಲ್ಲಿ ಸೃಷ್ಟಿಯಾಗಿರುವ ಕಳವಳದ ನಡುವೆಯೇ ಈ ಸ್ಪಷ್ಟೀಕರಣ ಹೊರಬಿದ್ದಿದೆ.

ಆಧಾರ್‌ ಸಂಖ್ಯೆಯು ಪೌರತ್ವದ ದಾಖಲೆ ಅಲ್ಲ. ಪೌರತ್ವದ ವಿಚಾರದ ಜತೆಗೆ ಆಧಾರ್‌ಗೆ ಯಾವ ಸಂಬಂಧವೂ ಇಲ್ಲ ಎಂದು ಯುಐಡಿಎಐ ಬುಧವಾರ ಸ್ಪಷ್ಟಪಡಿಸಿದೆ. ಆದರೆ, ಆಧಾರ್‌ ನೋಂದಣಿಗೆ ಅರ್ಜಿ ಸಲ್ಲಿಸುವ ಮುಂಚಿನ 182 ದಿನ ವ್ಯಕ್ತಿಯು ಭಾರತದಲ್ಲಿ ವಾಸವಾಗಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯ. ಹಾಗೆಯೇ, ಅಕ್ರಮ ವಲಸಿಗರಿಗೆ ಆಧಾರ್‌ ಸಂಖ್ಯೆ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ ಎಂದು ಆಧಾರ್‌ ಪ್ರಾಧಿಕಾರವು ತಿಳಿಸಿದೆ.

‘ಪೌರತ್ವ ಪರಿಶೀಲನೆ ಅಧಿಕಾರ ಇಲ್ಲ’
ಭಾರತದ ಪೌರ ಎಂಬುದನ್ನು ಸಾಬೀತು ಮಾಡಿ ಎಂದು ಹೈದರಾಬಾದ್‌ನ ಮೊಹಮ್ಮದ್‌ ಸತ್ತಾರ್‌ ಖಾನ್‌ ಎಂಬವರಿಗೆ ಆಧಾರ್‌ ಪ್ರಾಧಿಕಾರವು ನೋಟಿಸ್‌ ನೀಡಿದೆ.

ಫೆಬ್ರುವರಿ 3ನೇ ದಿನಾಂಕದ ಈ ನೋಟಿಸ್‌ನ ಬಗ್ಗೆ ಖಾನ್‌ ಮತ್ತು ಅವರ ವಕೀಲಮುಜಫ್ಫರ್‌ ಉಲ್ಲಾ ಖಾನ್‌ ಆಕ್ಷೇಪ ವ್ಯಕ್ತ‍ಪಡಿಸಿದ್ದಾರೆ. ಯಾವುದೇ ವ್ಯಕ್ತಿಯ ಪೌರತ್ವವನ್ನು ಪರಿಶೀಲಿಸುವ ಅಧಿಕಾರ ಯುಐಡಿಎಐಗೆ ಇಲ್ಲ ಎಂದು ಅವರು ಹೇಳಿದ್ದಾರೆ.

ಖಾನ್ ಅವರಲ್ಲದೆ, ಇದೇ ರೀತಿಯ ನೋಟಿಸ್‌ ಪಡೆದುಕೊಂಡ ಇನ್ನಿಬ್ಬರು ತಮ್ಮನ್ನು ಸಂಪರ್ಕಿಸಿದ್ದಾರೆ. ಅವರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ಮುಜಫ್ಫರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈ ಇಬ್ಬರು ಕೂಡ ಹೈದರಾಬಾದ್‌ನವರು.

ನೋಟಿಸ್‌ನಲ್ಲಿ ಏನಿದೆ?
‘ಪೌರತ್ವವನ್ನು ಸಾಬೀತು ಮಾಡುವುದಕ್ಕಾಗಿ ನಿಮ್ಮ ಎಲ್ಲ ಮೂಲ ದಾಖಲೆಗಳನ್ನು ತರಬೇಕು. ಒಂದು ವೇಳೆ, ನೀವು ಭಾರತೀಯ ಪ್ರಜೆ ಅಲ್ಲ ಎಂದಾದರೆ, ಭಾರತಕ್ಕೆ ನಿಮ್ಮ ಪ್ರವೇಶ ಮತ್ತು ಇಲ್ಲಿನ ವಾಸ್ತವ್ಯ ಸಕ್ರಮ ಎಂಬುದನ್ನು ಸಾಬೀತು ಮಾಡುವ ದಾಖಲೆಗಳನ್ನು ಹಾಜರುಪಡಿಸಬೇಕು’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

‘ಖುದ್ದಾಗಿ ಹಾಜರಾಗಿ ಭಾರತದ ಪ್ರಜೆ ಎಂಬುದನ್ನು ಸಾಬೀತು ಮಾಡುವ ಮೂಲ ದಾಖಲೆಗಳನ್ನು ಸಲ್ಲಿಸದೆ ಇದ್ದರೆ, ದೂರು/ಆರೋಪದ ಬಗ್ಗೆ ನಿಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ಭಾವಿಸಲಾಗುವುದು. ವಿವಾದವನ್ನು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದು. ಅದರಂತೆ, ಆಧಾರ್‌ (ನೋಂದಣಿ ಮತ್ತು ಪರಿಷ್ಕರಣೆ) ನಿಯಮಗಳು–2016ರ 29ನೇ ನಿಯಮದ ಪ್ರಕಾರ ನಿಮ್ಮ ಆಧಾರ್‌ ನೋಂದಣಿ ರದ್ದು ಮಾಡಲಾಗುವುದು’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.