ADVERTISEMENT

'ಮೋದಿ ಇಳಿಸಿ, ದೇಶ ಉಳಿಸಿ': ಎಎಪಿಯಿಂದ ದೇಶದಾದ್ಯಂತ ಪೋಸ್ಟರ್ ಅಭಿಯಾನ

ಪಿಟಿಐ
Published 30 ಮಾರ್ಚ್ 2023, 14:37 IST
Last Updated 30 ಮಾರ್ಚ್ 2023, 14:37 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ‘ಆಮ್‌ ಆದ್ಮಿ ಪಕ್ಷವು (ಎಎಪಿ) ‘ಮೋದಿ ಇಳಿಸಿ, ದೇಶ ಉಳಿಸಿ’ (ಮೋದಿ ಹಠಾವೋ, ದೇಶ್‌ ಬಚಾವೋ) ಎನ್ನುವ ಪೋಸ್ಟರ್‌ ಅಭಿಯಾನವನ್ನು ಗುರುವಾರದಂದು ದೇಶದಾದ್ಯಂತ ಹಮ್ಮಿಕೊಂಡಿತ್ತು. 22 ರಾಜ್ಯಗಳಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ’ ಎಂದು ದೆಹಲಿ ಘಟಕದ ಸಂಚಾಲಕ, ಸಚಿವ ಗೋಪಾಲ್‌ ರೈ ತಿಳಿಸಿದ್ದಾರೆ.

‘ಬಿಜೆಪಿಯು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಸಂದೇಶವನ್ನು ದೇಶದಾದ್ಯಂತ ಜನರಿಗೆ ತಿಳಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ರೈತರಿಗೆ ನೀಡಿದ್ದ ಭರವಸೆಯನ್ನೂ ಕೇಂದ್ರ ಈವರೆಗೂ ಈಡೇರಿಸಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲಿದೆ ಬಿಜೆಪಿಯು ಪ್ರಜಾಪ್ರಭುತ್ವವನ್ನೇ ನಾಶಪಡಿಸಲು ಮುಂದಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ವಿರೋಧವನ್ನು ಸಹಿಸದೆ, ಗೌರವಿಸದೆ ಅಧಿಕಾರದಲ್ಲಿ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಟ್ಟುಹಿಡಿದಿದ್ದಾರೆ. ಈ ಪ್ರವೃತ್ತಿಯು ಭಾರತದ ಪ್ರಜಾತಂತ್ರ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಒಡ್ಡುವ ಬೆದರಿಕೆಯಾಗಿದೆ. ಜೊತೆಗೆ, ಕೇಂದ್ರ ತನಿಖಾ ಸಂಸ್ಥೆಗಳ ಸ್ವತಂತ್ರ ಅಸ್ತಿತ್ವ ಹಾಗೂ ನ್ಯಾಯಾಂಗ ಪ್ರಕ್ರಿಯೆ ಕುರಿತು ಇರುವ ನಂಬಿಕೆಯನ್ನು ಕೇಂದ್ರ ಸರ್ಕಾರವು ಹಾಳುಗೆಡುವುತ್ತಿದೆ’ ಎಂದು ದೂರಿದರು.

ADVERTISEMENT

‘ಏಪ್ರಿಲ್‌ 10ರಂದು ದೇಶದಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಇದೇ ರೀತಿಯ ಪೋಸ್ಟರ್‌ಗಳನ್ನು ಅಂಟಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.