ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿದರು
–ಪಿಟಿಐ ಚಿತ್ರ
ನವದೆಹಲಿ: ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರೊಬ್ಬರು ಗ್ಯಾಂಗ್‌ಸ್ಟರ್‌ಗಳ ನೆರವಿನಿಂದ ಹಣ ಸುಲಿಗೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮತ್ತು ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ಗ್ಯಾಂಗ್‌ಸ್ಟರ್‌ಗಳೊಂದಿಗೆ ಎಎಪಿ ಶಾಸಕರೊಬ್ಬರು ಸಂಭಾಷಣೆ ನಡೆಸಿರುವ ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದಾರೆ.
‘ಜನರನ್ನು ಬೆದರಿಸಿ ಹಣ ವಸೂಲಿ ಮಾಡುವಲ್ಲಿ ಎಎಪಿ ತೊಡಗಿದೆ. ಕೂಡಲೇ ಭ್ರಷ್ಟ ಶಾಸಕರ ರಾಜೀನಾಮೆ ಪಡೆಯಬೇಕು’ ಎಂದು ಮುಖ್ಯಮಂತ್ರಿ ಆತಿಶಿ ಮತ್ತು ಮಾಜಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಭಾಟಿಯಾ ಒತ್ತಾಯಿಸಿದ್ದಾರೆ.
ಶಾಸಕರ ರಾಜೀನಾಮೆ ಪಡೆಯದಿದ್ದರೆ ಪಕ್ಷ ಮತ್ತು ಮುಖಂಡರಿಗೆ ಸುಲಿಗೆ ಹಣ ಹೋಗುತ್ತಿದೆ ಎಂದು ಭಾವಿಸಲಾಗುವುದು ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಈ ಬಾರಿ ರಾಜ್ಯದ ಜನರು ಎಎಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಲ್ಲದೆ, ವಿರೋಧ ಪಕ್ಷದಲ್ಲಿ ಉಳಿಯಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತಾರೆ ಎಂದು ಭಾಟಿಯಾ ಟೀಕಿಸಿದ್ದಾರೆ.
ಬಿಜೆಪಿ ಆರೋಪ ಕುರಿತು ಎಎಪಿ ನಾಯಕರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.