ADVERTISEMENT

ವಿದ್ಯುತ್ ದರ ಏರಿಕೆ ಖಂಡಿಸಿ ಸಿಎಂ ಅಮರಿಂದರ್ ಸಿಂಗ್ ಮನೆ ಮುಂದೆ ಎಎಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 12:56 IST
Last Updated 10 ಜನವರಿ 2020, 12:56 IST
   

ಚಂಡೀಗಢ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ನೂರಾರು ಕಾರ್ಯಕರ್ತರು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಮನೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.

ಆಪ್ ನಾಯಕ ಭಗವಂತ್ ಮನ್ ಅವರ ನೇತೃತ್ವದಲ್ಲಿ ಸಿಂಗ್ ಮನೆ ಮುಂದೆ ಪ್ರತಿಭಟನೆ ಕೈಗೊಳ್ಳಲಾಗಿದೆ. ವಿದ್ಯುತ್ ದರ ಏರಿಕೆ ಮತ್ತು ಕಳೆದ ಎಸ್‌ಎಡಿ-ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಖರೀದಿಗಾಗಿ ಖಾಸಗಿ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಕುರಿತು ಪ್ರತಿಭಟನೆ ಕೈಗೊಂಡಿದೆ. ಪಂಜಾಬ್‌ನ ವಿದ್ಯುತ್ ಮಂಡಳಿಯು ಕಳೆದ ವರ್ಷ ಮೇನಲ್ಲಿ 2019-20ರ ವಿದ್ಯುತ್ ದರವನ್ನು ಶೇ 2.14ರಷ್ಟು ಹೆಚ್ಚಿಸಿತ್ತು.

ಮುಖ್ಯಮಂತ್ರಿ ನಿವಾಸದ ಕಡೆಗೆ ತೆರಳುವುದನ್ನು ತಪ್ಪಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದು, ಭಗವಂತ್ ಮನ್, ಹರ್ಪಾಲ್ ಚೀಮಾ ಮತ್ತು ಶಾಸಕ ರುಪಿಂದರ್ ರುಬಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ವಿದ್ಯುತ್ ದರ ಏರಿಕೆ ವಿರುದ್ಧ ಜ್ಞಾಪಕ ಪತ್ರವನ್ನು ಸಲ್ಲಿಸಲು ಆಪ್ ಸದಸ್ಯರು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಲು ಬಯಸಿದ್ದರು. ಆದರೆ ಪೊಲೀಸರು ಮುಖ್ಯಮಂತ್ರಿ ಮನೆಯ ಸಮೀಪದಲ್ಲೇ ಅವರನ್ನು ತಡೆದಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಬಳಿಯಲ್ಲಿ ಹೆಚ್ಚಿನ ಜನರು ಸೇರುವ ಹಿನ್ನೆಲೆಯಲ್ಲಿ ಆ ಕಡೆಗೆ ತೆರಳುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

ವಿದ್ಯುತ್ ಸುಂಕದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿರೋಮಣಿ ಅಕಾಲಿ ದಳ ಪ್ರತಿಭಟನೆ ನಡೆಸಿದ ನಂತರ ಪಂಜಾಬ್‌ನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಆಪ್ ಇಂದು ಪ್ರತಿಭಟನೆ ಕೈಗೊಂಡಿದೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್, ಇದೀಗ ಎರಡನೇ ಬಾರಿಗೆ ದೆಹಲಿ ಗದ್ದುಗೆ ಮೇಲೆ ಕಣ್ಣಿಟ್ಟಿದೆ.ಹೀಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣವನ್ನು ನೀಡುವ ಭರವಸೆ ನೀಡಿದೆ. ಕಳೆದ ಆಗಸ್ಟ್‌ನಲ್ಲಿ ಕೇಜ್ರಿವಾಲ್, ಪ್ರತಿ ತಿಂಗಳಿಗೆ 200 ಯುನಿಟ್‌ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿಗೆ ಬಳಸಿದರೆ ಮಾತ್ರ ಬಿಲ್ ಪಾವತಿಸಬೇಕು ಎಂದು ಘೋಷಿಸಿದ್ದರು. ಇದಕ್ಕಾಗಿ ಸರ್ಕಾರವು ಪ್ರತಿವರ್ಷ ₹1,800 ರಿಂದ ₹ 2,000 ಕೋಟಿಗಳನ್ನು ಭರಿಸುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.