ಅಭಯ್ ಸಿಂಗ್- ಬಾಂಬೆ IITಯಲ್ಲಿ ಎಂಜಿನಿಯರಿಂಗ್ ಪದವಿ ಪಡೆಸು ಸನ್ಯಾಸಿಯಾದ ಯುವಕ
ಚಿತ್ರ ಕೃಪೆ: ಎಕ್ಸ್
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ಆಧ್ಯಾತ್ಮಿಗಳು ಪಾಲ್ಗೊಂಡಿದ್ದಾರೆ.
ಭಕ್ತರು, ಸಾಧು– ಸಂತರು, ನಾಗಾಸಾಧುಗಳಿಂದ ಪ್ರಯಾಗ್‌ರಾಜ್ ಕಂಗೊಳಿಸುತ್ತಿದೆ. ಇವರ ನಡುವೆ ಐಐಟಿ ಬಾಂಬೆನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಓದಿದ್ದ ಸಾಧುವೊಬ್ಬರು ‘ಐಐಟಿ ಬಾಬಾ’ ಎಂದು ತಮ್ಮನ್ನು ತಾವು ಕರೆದುಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ಅಭಯ್ ಸಿಂಗ್ ಎನ್ನುವರೇ ಈ ‘ಐಐಟಿ ಬಾಬಾ’. ಹರಿಯಾಣ ಮೂಲದ ಇವರು ತಮ್ಮ ವೃತ್ತಿ, ಲೌಕಿಕ ಬದುಕನ್ನು ಬಿಟ್ಟು ಆಧ್ಯಾತ್ಮದಲ್ಲಿ ತೊಡಗಿಕೊಂಡಿದ್ದಾರೆ.
ವರದಿಗಳ ಪ್ರಕಾರ ಅಭಯ್ ಸಿಂಗ್ 2014ರಲ್ಲಿ ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. ಉತ್ತಮ ಸಂಬಳದ ಕೆಲಸಕ್ಕೆ ಸೇರಿದ್ದ ಅಭಯ್ ಅವರು ಕೆಲವೇ ದಿನಗಳಲ್ಲಿ ಕೆಲಸ ಬಿಟ್ಟು ಫೋಟೊಗ್ರಫಿಯನ್ನು ಮಾಡುತ್ತಿದ್ದರು. ಪ್ರವಾಸಿ ಫೋಟೊಗ್ರಫಿ ಅಭಯ್ ಅವರ ನೆಚ್ಚಿನ ಹವ್ಯಾಸವಾಗಿತ್ತು. ಕ್ರಮೇಣ ಫೋಟೊಗ್ರಫಿ ಕೋರ್ಸ್ ಮಾಡುವ ಮೂಲಕ ಅದನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದರು. ಈ ಅವಧಿಯಲ್ಲಿ ಜೀವನದ ಬಗೆಗಿನ ತತ್ವಶಾಸ್ತ್ರ ಬದಲಾಯಿತು ಎನ್ನುತ್ತಾರೆ ಅಭಯ್.
ಬಳಿಕ ಫೋಟೊಗ್ರಫಿಯನ್ನೂ ಬಿಟ್ಟು ಹೊಸದನ್ನು ಹುಡುಕುವ ತುಡಿತದಲ್ಲಿ ಕೋಚಿಂಗ್ ಸೆಂಟರ್ ತೆರೆದು ವಿದ್ಯಾರ್ಥಿಗಳಿಗೆ ಭೌತ ವಿಜ್ಞಾನ ಪಾಠ ಮಾಡುತ್ತಿದ್ದರು. ಆಧ್ಯಾತ್ಮದೆಡೆಗಿನ ಆಕರ್ಷಣೆ ಅವರನ್ನು ಅದನ್ನೂ ಮುಂದುವರಿಸಲು ಬಿಡಲಿಲ್ಲ. ಹೀಗಾಗಿ ಅಭಯ್ ತಮ್ಮ ಜೀವನವನ್ನು ಆಧ್ಯಾತ್ಮಿಕ ಸತ್ಯವನ್ನು ತಿಳಿಯಲು ಮತ್ತು ಅನುಭವಿಸಲು ಮೀಸಲಿಟ್ಟರು.
ಮಹಾಕುಂಭ ಮೇಳದಲ್ಲಿ ಶಿವನ ಭಕ್ತ ಎಂದು ಗುರುತಿಸಿಕೊಳ್ಳುವ ಅಭಯ್, ‘ಆಧ್ಯಾತ್ಮಿಕತೆಯನ್ನು ನಾನು ಈಗ ಆನಂದಿಸುತ್ತಿದ್ದೇನೆ. ಇನ್ನಷ್ಟು ಆಳಕ್ಕೆ ಇಳಿದು ವಿಜ್ಞಾನದ ಮೂಲಕ ಆಧ್ಯಾತ್ಮಿಕತೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಎಲ್ಲವೂ ಶಿವನೇ ಆಗಿದ್ದಾನೆ, ಶಿವನೇ ಸತ್ಯ ಮತ್ತು ಸುಂದರ’ ಎಂದು ಹೇಳಿದ್ದಾರೆ.
ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಅನೇಕ ಮಾಧ್ಯಮಗಳಿಗೆ ಅಭಯ್ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.