
ಬಂಧನ
ನಾಂದೇಡ್, ಮಹಾರಾಷ್ಟ್ರ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಹೊರಬಂದು ಸಂತ್ರಸ್ತೆಯ ಪತಿಗೆ ಬೆಂಕಿ ಹಚ್ಚಿದ ಪ್ರಕರಣ ನಯಗಾಂವ್ ತಾಲ್ಲೂಕಿನ ಬೇಂದ್ರಿ ಗ್ರಾಮದಲ್ಲಿ ನಡೆದಿದೆ.
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಿಸೆಂಬರ್ 22ರಂದು ಸಂತೋಷ್ ರಾವ್ ಬೇಂದ್ರಿಕರ್ ವಿರುದ್ಧ ಇಲ್ಲಿನ ನಯಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 28ರಂದು ಆರೋಪಿಗೆ ಜಾಮೀನು ಸಿಕ್ಕಿತ್ತು.
‘ಡಿಸೆಂಬರ್ 29ರಂದು ಸಂತ್ರಸ್ತೆಯ ಪತಿ ಹಾಗೂ ಆರೋಪಿ ಮುಖಾಮುಖಿಯಾಗಿದ್ದಾರೆ. ಈ ವಿಚಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಂತ್ರಸ್ತೆಯ ಪತಿಯು, ನಿರ್ಲಕ್ಷಿಸಿ, ಅಲ್ಲಿಂದ ಸೀದಾ ಮನೆಯ ಸಮೀಪದಲ್ಲಿ ಎಮ್ಮೆ ಸಾಕಿದ್ದ ಕೊಟ್ಟಿಗೆಗೆ ತೆರಳಿ, ಹುಲ್ಲು ನೀಡಿದ್ದಾರೆ. ಅಲ್ಲಿಗೂ ಬೆನ್ನತ್ತಿ ಹೋದ ಆರೋಪಿ ಹಾಗೂ ಆತನ ಸಹೋದರ ಶಿವಕುಮಾರ್, ಸಂತ್ರಸ್ತೆಯ ಪತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಅವರನ್ನು ನಾಂದೇಡ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ, ಆತನ ಸಹೋದರ ಹಾಗೂ ಆತನ ತಂದೆಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರಪಡಿಸಲಾಯಿತು. ಆರೋಪಿಗಳನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ಒಪ್ಪಿಸಿದೆ’ ಎಂದು ಸಬ್ ಇನ್‌ಸ್ಪೆಕ್ಟರ್ ಗಜಾನನ್ ತೋಟೆವಾಡ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.