ಅಗರ್ತಲಾ: ಅಗರ್ತಲಾದಲ್ಲಿರುವ ಬಾಂಗ್ಲಾದೇಶದ ಅಸಿಸ್ಟೆಂಟ್ ಹೈಕಮಿಷನ್ ಕಚೇರಿ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
‘ಮೂವರು ಸಬ್ ಇನ್‌ಸ್ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ ಮತ್ತು ಉಪ ಪೊಲೀಸ್ ನಿರ್ಲಕ್ಷ್ಯ ಧೋರಣೆ ಆರೋಪದ ಕಾರಣ ವರಿಷ್ಠಾಧಿಕಾರಿಯೊಬ್ಬರಿಗೆ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಬಂಧಿತ ಏಳೂ ಮಂದಿ, ಪ್ರತಿಭಟನೆ ಆಯೋಜಿಸಿದ್ದ ಹಿಂದೂ ಸಂಘರ್ಷ ಸಮಿತಿಯ ಸದಸ್ಯರು’ ಎಂದು ಪಶ್ಚಿಮ ತ್ರಿಪುರಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ತಿಳಿಸಿದರು.
‘ಘಟನೆ ಸಂಬಂಧ ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ’ ಎಂದು ಹೇಳಿದರು.
ಭದ್ರತೆ ಹೆಚ್ಚಳ:
ದಾಳಿ ಬೆನ್ನಲ್ಲೇ ರಾಜತಾಂತ್ರಿಕ ಕಚೇರಿಯ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ತ್ರಿಪುರಾ ರಾಜ್ಯ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜತಾಂತ್ರಿಕ ಸೇವೆ ಸ್ಥಗಿತ
ಅಗರ್ತಲಾದಲ್ಲಿರುವ ಬಾಂಗ್ಲಾದೇಶದ ಅಸಿಸ್ಟೆಂಟ್ ಹೈಕಮಿಷನ್ ಕಚೇರಿಯಲ್ಲಿ ವೀಸಾ ಸೇರಿದಂತೆ ಎಲ್ಲ ರೀತಿಯ ರಾಜತಾಂತ್ರಿಕ ಸೇವೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಭಾರತವು ಈ ದಾಳಿಯನ್ನು ‘ಅತ್ಯಂತ ವಿಷಾದನೀಯ’ ಎಂದು ಹೇಳಿದೆ. ‘ಎಂಥದ್ದೇ ಸಂದರ್ಭದಲ್ಲೂ ರಾಜತಾಂತ್ರಿಕ ಕಚೇರಿಗಳನ್ನು ಗುರಿಯಾಗಿಸಬಾರದು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಸಾವಿರಾರು ಜನರಿಂದ ರ‍್ಯಾಲಿ
ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಮತ್ತು ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಸಾವಿರಾರು ಜನರು ಅಗರ್ತಲಾದಲ್ಲಿ ಮಂಗಳವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು. ‘ಸನಾತನಿ ಯುವ’ ಬ್ಯಾನರ್ ಅಡಿಯಲ್ಲಿ ರ‍್ಯಾಲಿ ನಡೆಸಿದರು. ಆದರೆ ಪ್ರತಿಭಟನಕಾರರು ಅಂತರರಾಷ್ಟ್ರೀಯ ಗಡಿ ಸಮೀಪದ ಅಖೌರ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನತ್ತ ತೆರಳಲು ಪೊಲೀಸರು ಅವಕಾಶ ನೀಡಲಿಲ್ಲ. ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಮಾಜಿ ಸಚಿವೆ ಪ್ರತಿಮಾ ಭೌಮಿಕ್ ಅವರು ‘ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನವಾದ ನಂತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ 17000 ಸ್ವತ್ತುಗಳ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.