ADVERTISEMENT

ಕೋವಿಡ್‌: ಸಕ್ರಿಯ ಪ್ರಕರಣಗಳು ತುಸು ಇಳಿಕೆ

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಅತ್ಯಧಿಕ ಪ್ರಕರಣಗಳು ದೃಢ

ಪಿಟಿಐ
Published 11 ಮೇ 2021, 10:32 IST
Last Updated 11 ಮೇ 2021, 10:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದಲ್ಲಿ ಕಳೆದ 61 ದಿನಗಳಲ್ಲಿ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳು 30,016ರಷ್ಟು ಕಡಿಮೆಯಾಗಿವೆ. ಸದ್ಯ, ಸಕ್ರಿಯ ಪ್ರಕರಣಗಳ ಸಂಖ್ಯೆ 37,15,221ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ಇದೇ ಅವಧಿಯಲ್ಲಿ ಗುಣಮುಖರಾದವರ ಸಂಖ್ಯೆ ಹೊಸ ಪ್ರಕರಣಗಳಿಗಿಂತಲೂ ಅಧಿಕವಾಗಿದೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಸದ್ಯ ಸಕ್ರಿಯವಾಗಿರುವ ಪ್ರಕರಣಗಳ ಪ್ರಮಾಣ ಶೇ 16.16 ಎಂದು ತಿಳಿಸಿದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ 13 ರಾಜ್ಯಗಳಲ್ಲಿ ಶೇ 82.68 ಪ್ರಕರಣಗಳಿವೆ. ಅಂತೆಯೇ ಬೆಂಗಳೂರು ನಗರ, ಪುಣೆ, ದೆಹಲಿ, ನಾಗಪುರ, ಮುಂಬೈ ಒಳಗೊಂಡು ವಿವಿಧ 10 ಜಿಲ್ಲೆಗಳಲ್ಲಿ ಶೇ 24.44ರಷ್ಟು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯವು ವಿವರಿಸಿದೆ.

ADVERTISEMENT

ಪ್ರಕರಣಗಳು ಹೆಚ್ಚು ವರದಿ ಆಗುತ್ತಿರುವ ರಾಜ್ಯಗಳೆಂದರೆ ಕರ್ನಾಟಕ , ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ಬಿಹಾರ, ಮಧ್ಯಪ್ರದೇಶ, ಹರಿಯಾಣ, ಛತ್ತೀಸಗಡ.

ಕರ್ನಾಟಕದಲ್ಲಿ ಅತ್ಯಧಿಕ ಅಂದರೆ 39,035 ಹೊಸ ಪ್ರಕರಣಗಳು ವರದಿಯಾಗಿದ್ದರೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (37,236) ಮತ್ತು ತಮಿಳುನಾಡು (28,978) ರಾಜ್ಯಗಳಿವೆ. ದೇಶವ್ಯಾಪಿ ಸಾವಿನ ಪ್ರಮಾಣ ಒಟ್ಟು ಪ್ರಕರಣಗಳ ಶೇ 1.09ರಷ್ಟಿದೆ ಎಂದು ಸಚಿವಾಲಯವು ವಿವರಿಸಿದೆ.

ಕಳೆದ 24 ಗಂಟೆಗಳಲ್ಲಿ 3,876 ಸಾವುಗಳು ವರದಿಯಾಗಿವೆ. ಪೈಕಿ ಶೇ 73.09ರಷ್ಟು ಪ್ರಕರಣಗಳು 10 ಜಿಲ್ಲೆಗಳಲ್ಲಿವೆ. ಕರ್ನಾಟಕದಲ್ಲಿ ಅಧಿಕ ಅಂದರೆ 596 ಸಾವುಗಳು ಸಂಭವಿಸಿದ್ದರೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, ಅಲ್ಲಿ 549 ಸಾವುಗಳು ಸಂಭವಿಸಿವೆ.

ಲಸಿಕೆ: ಕೋವಿಡ್‌ ವಿರುದ್ಧ ಲಸಿಕೆ ಪಡೆದವರ ಸಂಖ್ಯೆ ಒಟ್ಟಾರೆ 17,27,10,666ಕ್ಕೆ ಏರಿದೆ. ಇವರಲ್ಲಿ 95.64 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್‌, 65.05 ಲಕ್ಷ ಕಾರ್ಯಕರ್ತರಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ. ಮುಂಚೂಣಿ ಕಾರ್ಯಕರ್ತರಲ್ಲಿ 1.40 ಕೋಟಿ ಕಾರ್ಯಕರ್ತರಿಗೆ ಮೊದಲ ಮತ್ತು 78.53 ಲಕ್ಷ ಕಾರ್ಯಕರ್ತರಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ. 18–44 ವರ್ಷದೊಳಗಿನ ಒಟ್ಟು 25.59 ಲಕ್ಷ ಜನರಿಗೆ ಲಸಿಕೆಯನ್ನು ಇದುವರೆಗೂ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.