ADVERTISEMENT

ರೈತಚಳವಳಿ ಕುರಿತ ಟೂಲ್‌ಕಿಟ್‌ ಹಂಚಿಕೆ: ಬೆಂಗಳೂರಿನಲ್ಲಿ ಪರಿಸರ ಕಾರ್ಯಕರ್ತೆಯ ಬಂಧನ

ಪಿಟಿಐ
Published 14 ಫೆಬ್ರುವರಿ 2021, 12:15 IST
Last Updated 14 ಫೆಬ್ರುವರಿ 2021, 12:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ‘ಟೂಲ್‌ಕಿಟ್‌’ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಕ್ಕಾಗಿ 21 ವರ್ಷದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿಯ ಸೈಬರ್‌ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ದಿಶಾ ರವಿ ಅವರ ಬಂಧನ ಶನಿವಾರ ಆಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.

ಪರಿಸರಪರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರು ಟ್ವೀಟ್‌ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಹೇಗೆ ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಹಂಚಿಕೊಂಡಿದ್ದರು. ಇದರ ಸೃಷ್ಟಿಕರ್ತರಿಗೆ ಸಂಬಂಧಿಸಿದ ಇಮೇಲ್‌ ಐಡಿ, ಯುಆರ್‌ಎಲ್‌ಗಳು ಮತ್ತು ಕೆಲವು ಸಾಮಾಜಿಕ ಮಾಧ್ಯಮಗಳ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಗೂಗಲ್‌ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಈ ಹಿಂದೆ ಕೇಳಿದ್ದರು.

ADVERTISEMENT

ಅಲ್ಲದೆ, ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ ಸಾರಲಾಗಿದೆ ಎಂದು ಆರೋಪಿಸಿ ದೆಹಲಿ ಸೈಬರ್‌ ಪೊಲೀಸರು ಖಾಲಿಸ್ತಾನ ಪರ ಹೋರಾಟಗಾರರು ಮತ್ತು ಟೂಲ್‌ಕಿಟ್‌ ಸೃಷ್ಟಿಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ದೇಶದಲ್ಲಿ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ಕಾರ್ಯಯೋಜನೆಯನ್ನು ಈ ‘ಟೂಲ್‌ಕಿಟ್‌‘ ಒಳಗೊಂಡಿದೆ. ಜನವರಿ 26 ಮತ್ತು ಅದಕ್ಕೂ ಮುನ್ನ ಡಿಜಿಟಲ್ ಸ್ಟ್ರೈಕ್‌ ನಡೆಸುವ ಯೋಜನೆಯನ್ನು ಈ ಟೂಲ್‌ಕಿಟ್ ವಿವರಿಸಿದೆ. ಹೀಗಾಗಿ ಇದನ್ನು ಬರೆದ ವ್ಯಕ್ತಿಯ ವಿರುದ್ಧ, ಕ್ರಿಮಿನಲ್ ಸಂಚು ರೂಪಿಸಿದ ಮತ್ತು ದೇಶದ್ರೋಹ ಎಸಗಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಖಾಲಿಸ್ತಾನ ಪರ ಸಂಘಟನೆಯು ಈ ಟೂಲ್‌ಕಿಟ್‌ ಅನ್ನು ಸಿದ್ಧಪಡಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ದೆಹಲಿಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಈ ಹಿಂದೆ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.