ADVERTISEMENT

ಟೂಲ್‌ಕಿಟ್‌ ಎಫ್‌ಐಆರ್‌: ‘ಹಿಂಸೆಗೆ ಪ್ರತ್ಯೇಕತೆ ಕುಮ್ಮಕ್ಕು’

‘ಸಿಖ್ಸ್‌ ಫಾರ್‌ ಜಸ್ಟಿಸ್‌’ನಿಂದ ಗಲಭೆಗೆ ಹಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 22:12 IST
Last Updated 18 ಫೆಬ್ರುವರಿ 2021, 22:12 IST
   

ನವದೆಹಲಿ: ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಪ್ರತ್ಯೇಕತಾವಾದಿ ಧ್ವಜ ಹಾರಿಸಬೇಕು ಎಂದು ಖಾಲಿಸ್ತಾನಿ ಹೋರಾಟದ ಪರವಾಗಿರುವ ನಿಷೇಧಿತ ಸಂಘಟನೆ ಸಿಖ್ಸ್‌ ಫಾರ್‌ ಜಸ್ಟಿಸ್‌ ಕರೆ ಕೊಟ್ಟಿತ್ತು ಎಂದು ಪೊಲೀಸರುಎಫ್‌ಐಆರ್‌ನಲ್ಲಿ ಆಪಾದಿಸಿದ್ದಾರೆ.

ಅಂದು ರೈತರು ನಡೆಸಿದ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಹಿಂಸಾಚಾರ ಎಸಗುವುದಕ್ಕಾಗಿ 2.5 ಲಕ್ಷ ಡಾಲರ್‌ಗಳನ್ನು (ಸುಮಾರು ₹1.8 ಕೋಟಿ) ಈ ಸಂಘಟನೆ ನೀಡಿದೆ. ಭಾರತ ಮತ್ತು ಭಾರತದ ಕೆಲವು ಕಂಪನಿಗಳ ವಿರುದ್ಧ ವಾಣಿಜ್ಯ ಸಮರಕ್ಕೂ ಟೂಲ್‌ಕಿಟ್‌ನಲ್ಲಿ ಕರೆಕೊಡಲಾಗಿದೆ. ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿನ ಹಿಂಸಾಚಾರವು ‘ಪೂರ್ವಯೋಜಿತ ಸಂಚು’ ಎಂದು ಟೂಲ್‌ಕಿಟ್‌ ಪ್ರಕರಣದ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ದೆಹಲಿ ಪೊಲೀಸ್‌ ಇಲಾಖೆಯ ಸೈಬರ್‌ ಅಪರಾಧ ತಡೆ ವಿಭಾಗವು ಸಾಮಾಜಿಕ ಮಾಧ್ಯಮದ ಮೇಲೆ ಇರಿಸಿದ ನಿಗಾದ ಆಧಾರದಲ್ಲಿ ಫೆ. 4ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಅವರು ಟೂಲ್‌ಕಿಟ್‌ ಅನ್ನು ಲಗತ್ತಿಸಿ ಮಾಡಿದ ಟ್ವೀಟ್‌, ಆಕಸ್ಮಿಕವಾಗಿ ತನಿಖಾಧಿಕಾರಿಗಳ ಕಣ್ಣಿಗೆ ಬಿತ್ತು. ಗ್ರೇಟಾ ಅವರು ಈ ಟ್ವೀಟ್‌ ಅನ್ನು ಬಳಿಕ ಅಳಿಸಿ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ADVERTISEMENT

ಜ. 26ರ ಹಿಂಸಾಚಾರವು ಪೂರ್ವಯೋಜಿತ ಎಂಬುದು ಟೂಲ್‌ಕಿಟ್‌ನ ವಿವರಗಳನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಈ ಟೂಲ್‌ಕಿಟ್‌ ಅನ್ನು ಗ್ರೇಟಾ ಅವರಿಗೆ ನೀಡಿದ್ದು ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ. ದಿಶಾ, ಮುಂಬೈನ ವಕೀಲೆ ನಿಕಿತಾ ಜೇಕಬ್‌ ಮತ್ತು ಬೀಢ್‌ನ ಶಾಂತನು ಮುಲುಕ್‌ ಹಾಗೂ ಇತರರು ಈ ಟೂಲ್‌ಕಿಟ್‌ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಈ ಎಲ್ಲರೂ ನಿರಾಕರಿಸಿದ್ದಾರೆ.

ಪ್ರತ್ಯೇಕತಾವಾದಿ ಧ್ವಜ ಹಾರಿಸಲು ಮತ್ತು ಹಿಂಸಾಚಾರ ನಡೆಸಲು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು 2.5 ಲಕ್ಷ ಡಾಲರ್‌ ಕೊಟ್ಟಿತ್ತು ಎಂದು ಎಫ್‌ಐಆರ್‌ನಲ್ಲಿ ಇದೆ. ಆದರೆ, ಜ. 26ರಂದು ಕೆಂಪುಕೋಟೆಯಲ್ಲಿ ಹಾರಿಸಿದ್ದು ಧಾರ್ಮಿಕ ಧ್ವಜ.

ಶಾಂತಿಯುತವಾಗಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲು ರೈತರು ಒಪ್ಪಿದ್ದರು. ಆದರೆ, ಟೂಲ್‌ಕಿಟ್‌ನ ಹಿಂದಿರುವ ಶಕ್ತಿಗಳೇ ಗಲಭೆಗೆ ಕುಮ್ಮಕ್ಕು ಕೊಟ್ಟಿವೆ ಎಂದು ಪೊಲೀಸರು ಆರೋಪಿಸಿದ್ದಾರೆ.

‘ಪಂಜಾಬ್‌ ಅನ್ನು ಭಾರತದಿಂದ ಪ್ರತ್ಯೇಕಿಸಿ ಖಾಲಿಸ್ತಾನ ಎಂದು ಘೋಷಿಸಬೇಕು ಎಂದು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ರೈತರ ಪ್ರತಿಭಟನೆಯನ್ನು ಮುಂದಿರಿಸಿಕೊಂಡು ತನ್ನ ಕಾರ್ಯಸೂಚಿಯನ್ನು ಮುಂದಕ್ಕೆ ತರುತ್ತಿದೆ. ಜನರಿಗೆ ಹಣ ನೀಡಿ, ಅಕ್ರಮವನ್ನು ಪ್ರಚೋದಿಸುವ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಈ ಸಂಘಟನೆಯು ಹಿಂಸೆಗೆ ಕುಮ್ಮಕ್ಕು ನೀಡಿದೆ’ ಎಂದು ಎಫ್‌ಐಆರ್‌ನಲ್ಲಿ ಇದೆ.

ಭಾರತದ ಸಂಕೇತಗಳಾದ ಯೋಗ ಮತ್ತು ಚಹಾದ ಮಹತ್ವವನ್ನು ಹಾಳುಗೆಡವುವಂತೆಯೂ ಕರೆ ನೀಡಲಾಗಿದೆ. ಭಾರತದ ಕೆಲವು ಪ್ರದೇಶಗಳ ನಡುವೆ ವೈರತ್ವ ಸೃಷ್ಟಿಯ ಪ್ರಯತ್ನವೂ ನಡೆದಿದೆ ಎಂದು ಎಫ್‌ಐಆರ್‌ ಹೇಳಿದೆ.

ರೈಲು ತಡೆ ಚಳವಳಿ
ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಒತ್ತಾಯಿಸಿ ದೆಹಲಿ, ಮಹಾರಾಷ್ಟ್ರ ಹರಿಯಾಣ ಹಾಗೂ ಪಂಜಾಬ್‌ ಸೇರಿದಂತೆ ದೇಶದ ಹಲವು ಭಾಗಗಲ್ಲಿ ಗುರುವಾರ ರೈಲು ತಡೆ ಚಳವಳಿ ನಡೆಸಲಾಯಿತು. ರೈತರು ರೈಲ್ವೆ ಹಳಿಗಳ ಮೇಲೆ ಕುಳಿತು ಧರಣಿ ನಡೆಸಿದರು. ರಾಷ್ಟ್ರವ್ಯಾಪಿ ರೈಲು ತಡೆ ಚಳವಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕಳೆದವಾರ ಕರೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.