ಜ್ಯೋತಿ ಸಿಂಗ್
ಚಿತ್ರಕೃಪೆ: ಎಕ್ಸ್
ಪಟ್ನಾ: ಭೋಜ್‌ಪುರಿ ನಟ, ರಾಜಕಾರಣಿ ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಅವರು ಬಿಹಾರದ ಕರಕಟ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾ ಚಾಣಾಕ್ಯ, ಜನ ಸುರಾಜ್ ಪಕ್ಷದ ಅಧ್ಯಕ್ಷ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಜ್ಯೋತಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೂ ಮೊದಲು ‘ಜನ ಸುರಾಜ್’ ಪಕ್ಷದಿಂದಲೇ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.
ಪತಿ ವಿರುದ್ಧ ಕಿರುಕುಳದ ಆರೋಪ:
ಪತಿ ಪವನ್ ಸಿಂಗ್ ವಿರುದ್ಧ ದಾಂಪತ್ಯ ದ್ರೋಹ, ಕಿರುಕುಳದ ಆರೋಪ ಮಾಡಿರುವ ಜ್ಯೋತಿ, ಸಹಾಯ ಮಾಡುವಂತೆ ಅನೇಕ ನಾಯಕರಲ್ಲಿ ಮನವಿ ಮಾಡಿದ್ದರು.
ಇತ್ತೀಚೆಗೆ ಲಖನೌ ಫ್ಲ್ಯಾಟ್‌ನಲ್ಲಿ ಪತಿಯನ್ನು ಭೇಟಿ ಮಾಡಿದ್ದ ಅವರು, ಅಲ್ಲಿ ತಾನು ಕಿರುಕುಳ ಅನುಭವಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪೋಸ್ಟ್ ಮಾಡಿ ಕಣ್ಣೀರು ಹಾಕಿದ್ದರು. ಆದರೆ, ಈ ಆರೋಪಗಳನ್ನು ಪವನ್ ಸಿಂಗ್ ನಿರಾಕರಿಸಿದ್ದು, ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಪವನ್ ಸಿಂಗ್
ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪವನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
‘ನಾನು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದನ್ನು ನನ್ನ ಭೋಜ್‌ಪುರಿ ಸಮುದಾಯಕ್ಕೆ ತಿಳಿಯ ಬಯಸುತ್ತೇನೆ’ ಎಂದು ಹೇಳಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಕರಕಟ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪವನ್ ಸಿಂಗ್, ಸಿಪಿಐ(ಎಂಎಲ್) ಲಿಬರೇಶನ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.