ADVERTISEMENT

ಡ್ರಗ್ಸ್‌ ಪ್ರಕರಣ: ಇ.ಡಿ ಎದುರು ವಿಚಾರಣೆಗೆ ಹಾಜರಾದ ತೆಲುಗು ನಟ ರಾಣಾ ದಗ್ಗುಬಾಟಿ

ಪಿಟಿಐ
Published 8 ಸೆಪ್ಟೆಂಬರ್ 2021, 6:29 IST
Last Updated 8 ಸೆಪ್ಟೆಂಬರ್ 2021, 6:29 IST
ರಾಣಾ ದಗ್ಗುಬಾಟಿ
ರಾಣಾ ದಗ್ಗುಬಾಟಿ    

ಹೈದರಾಬಾದ್‌: ಮಾದಕ ವಸ್ತುಗಳ ಜಾಲದ ಪ್ರಕರಣದಲ್ಲಿನ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ತೆಲುಗು ನಟ ರಾಣಾ ದಗ್ಗುಬಾಟಿ ಅವರು ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗೆ ಹಾಜರಾದರು.

ನಿರ್ದೇಶಕರು ಸೇರಿದಂತೆ ತೆಲುಗು ಚಿತ್ರರಂಗದ 10 ಮಂದಿಗೆ ಇ.ಡಿ ಸಮನ್ಸ್‌ ಜಾರಿ ಮಾಡಿದೆ. ಆಗಸ್ಟ್‌ 31ರಂದು ನಿರ್ದೇಶಕ ಪುರಿ ಜಗನ್ನಾಥ್, ನಟಿಯರಾದ ಚಾರ್ಮಿ ಕೌರ್, ರಕುಲ್‌ ಪ್ರೀತ್‌ ಸಿಂಗ್‌, ನಟ ನಂದು ಅವರು ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

2017, ಜುಲೈ 2 ರಂದು ತೆಲಂಗಾಣದ ಅಬಕಾರಿ ಇಲಾಖೆಯು ಡ್ರಗ್ಸ್‌ ಜಾಲವೊಂದನ್ನು ಭೇದಿಸಿತ್ತು. ಈ ವೇಳೆ ಎಲ್‌ಎಸ್‌ಡಿ ಮತ್ತು ಎಂಡಿಎಂನಂತಹ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಸಂಗೀತಗಾರ ಕ್ಯಾಲ್ವಿನ್‌ ಮ್ಯಾಸ್ಕ್ರೇನ್‌ಹಸ್‌ ಸೇರಿದಂತೆ ಮೂವರು ಸದಸ್ಯರ ಗ್ಯಾಂಗ್‌ ಅನ್ನು ಅಧಿಕಾರಿಗಳು ಬಂಧಿಸಿದ್ದರು.

ADVERTISEMENT

ಮಾದಕವಸ್ತುಗಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದು, ಈವರೆಗೆ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

‘ಈ ಗ್ಯಾಂಗ್‌ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಎಂಎನ್‌ಸಿ, ಐ.ಟಿ ಸಂಸ್ಥೆಗಳ ಉದ್ಯೋಗಿಗಳು ಮತ್ತು ಟಾಲಿವುಡ್‌ಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿತ್ತು. ಬಂಧಿತರ ವಿಚಾರಣೆ ವೇಳೆ ಕೆಲವೊಂದು ತೆಲುಗು ನಟ–ನಟಿಯ ಹೆಸರುಗಳು ಹೊರಬಂದಿದ್ದವು’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.