ADVERTISEMENT

‘ಅದಾನಿ’ ವಿರುದ್ಧ ಎಸ್‌ಐಟಿಗೆ ಸುಪ್ರೀಂ ಕೋರ್ಟ್‌ ನಕಾರ

ಷೇರು ಮೌಲ್ಯದ ಮೇಲೆ ಕೃತಕ ಪ್ರಭಾವದ ಆರೋಪ l ಸೆಬಿ ತನಿಖೆ ವಿಶ್ವಾಸಾರ್ಹ

ಪಿಟಿಐ
Published 3 ಜನವರಿ 2024, 23:22 IST
Last Updated 3 ಜನವರಿ 2024, 23:22 IST
   

ನವದೆಹಲಿ: ಅದಾನಿ ಸಮೂಹವು ತನ್ನ ಕಂಪನಿಗಳ ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರುವ ಕೆಲಸ ಮಾಡಿದೆ ಎಂಬ ಆರೋಪಗಳ ಕುರಿತ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಅಥವಾ ಸಿಬಿಐಗೆ ವರ್ಗಾಯಿಸಬೇಕು ಎಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಿರಸ್ಕರಿ
ಸಿದೆ. ಇದು ಅದಾನಿ ಸಮೂಹದ ಪಾಲಿಗೆ ಸಿಕ್ಕ ಜಯ ಎಂದು ವಿಶ್ಲೇಷಿಸಲಾಗಿದೆ.

ಸಮೂಹದ ವಿರುದ್ಧ ಬಾಕಿ ಇರುವ ಎರಡು ಪ್ರಕರಣಗಳ ವಿಚಾರಣೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕೋರ್ಟ್‌, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸೂಚಿಸಿದೆ. ಸೆಬಿ ಸಮಗ್ರವಾದ ತನಿಖೆಯನ್ನು ನಡೆಸುತ್ತಿದೆ, ಈ ತನಿಖೆಯು ವಿಶ್ವಾಸ ಮೂಡಿಸುವಂತೆ ಇದೆ ಎಂದು ಕೋರ್ಟ್‌ ಹೇಳಿದೆ.

ಸೆಬಿ ರೂಪಿಸುವ ನಿಯಮಗಳ ವಿಚಾರವಾಗಿ ತನ್ನ ನಿಲುವನ್ನು ಹೇರುವ ಕೆಲಸವನ್ನು ನ್ಯಾಯಾಲಯ ಮಾಡ
ಬಾರದು ಎಂದು ಹೇಳಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್
ನೇತೃತ್ವದ ನ್ಯಾಯಪೀಠವು, ಪ್ರಕರಣದ ವಾಸ್ತವಾಂಶಗಳು ತನಿಖೆಯನ್ನು ಸೆಬಿಯಿಂದ ಇನ್ನೊಂದು ಸಂಸ್ಥೆಗೆ ವರ್ಗಾಯಿಸುವ ಅಗತ್ಯವನ್ನು ಸೃಷ್ಟಿಸಿಲ್ಲ ಎಂದು ತಿಳಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿ ಇದ್ದರು.ಅದಾನಿ ಸಮೂಹದ ವಿರುದ್ಧದ 24 ಪ್ರಕರಣಗಳ ಪೈಕಿ 22ರಲ್ಲಿ ತನಿಖೆಯನ್ನು ಸೆಬಿ ಪೂರ್ಣಗೊಳಿಸಿದೆ. ಇನ್ನುಳಿದ ಎರಡು ಪ್ರಕರಣಗಳ ತನಿಖೆ ಪೂರ್ಣಗೊಳ್ಳಬೇಕಿದೆ.

ಸೆಬಿ ನಡೆಸುತ್ತಿರುವ ತನಿಖೆಯನ್ನು ಪ್ರಶ್ನಿಸಲು ಅರ್ಜಿದಾರರು ಕೆಲವು ಪತ್ರಿಕಾ ವರದಿಗಳನ್ನು ಆಧಾರವಾಗಿ ಇರಿಸಿಕೊಂಡಿರುವುದು, ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆಯ (ಒಸಿಸಿಆರ್‌ಪಿ) ವರದಿಯೊಂದನ್ನು ಆಧರಿಸಿರುವುದು ವಿಶ್ವಾಸ ಮೂಡಿಸುವಂತೆ ಇಲ್ಲ ಎಂದು ಕೋರ್ಟ್‌ ಹೇಳಿದೆ.

‘ಮೂರನೆಯ ಸಂಸ್ಥೆಯೊಂದರ ವರದಿಯಲ್ಲಿನ ಆರೋಪಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಪ್ರಯತ್ನ ನಡೆಸದೆಯೇ, ಅದನ್ನು ನಿರ್ಣಾಯಕ ಆಧಾರ ಎಂದು ಪರಿಗಣಿಸಲು ಆಗದು’ ಎಂದು ಕೋರ್ಟ್ ಹೇಳಿದೆ.

ಅದಾನಿ–ಹಿಂಡನ್‌ಬರ್ಗ್‌ ವಿವಾದ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ಈ ತೀರ್ಪು ನೀಡಿದೆ. ವಕೀಲರಾದ ವಿಶಾಲ್ ತಿವಾರಿ, ಎಂ.ಎಲ್. ಶರ್ಮ, ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಅನಾಮಿಕಾ ಜೈಸ್ವಾಲ್ ಅವರು ಈ ಅರ್ಜಿಗಳನ್ನು ಸಲ್ಲಿಸಿದ್ದರು. ಅದಾನಿ ಸಮೂಹವು ತನ್ನ ಕಂಪನಿಗಳ ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರುವ ಕೆಲಸ ಮಾಡಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಆರೋಪಿಸಿತ್ತು. ಸಂಸ್ಥೆಯು ಈ ಆರೋಪ ಮಾಡಿದ ನಂತರದಲ್ಲಿ, ಅದಾನಿ ಸಮೂಹದ ಷೇರುಪೇಟೆ ನೋಂದಾಯಿತ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರಿ ಕುಸಿತ ಕಂಡುಬಂದಿತ್ತು. ಆರೋಪಗಳನ್ನು ಅದಾನಿ ಸಮೂಹ ಅಲ್ಲಗಳೆದಿತ್ತು.

ಸೆಬಿ ಸಂಸ್ಥೆಯು ಕಾನೂನಿಗೆ ಅನುಗುಣವಾಗಿ ತನಿಖೆ ನಡೆಸಿ, ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು ಎಂದು ಸಿಜೆಐ ಅವರು ತೀರ್ಪಿನಲ್ಲಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಸಮಿತಿಯ ಕೆಲವು ಸದಸ್ಯರು ಹಿತಾಸಕ್ತಿ ಸಂಘರ್ಷ ಎದುರಿಸುತ್ತಿದ್ದಾರೆ ಎಂಬ ಆರೋಪಗಳಿಗೆ ಆಧಾರವಿಲ್ಲ ಎಂದು ಕೋರ್ಟ್ ಹೇಳಿದೆ.

‘ಹಿಂಡನ್‌ಬರ್ಗ್‌ ರಿಸರ್ಚ್‌ನ ನಡೆ ಅಥವಾ ಇತರ ಯಾವುದೇ ಸಂಸ್ಥೆಯು ಶಾರ್ಟಿಂಗ್‌ ಮಾಡಿದ ಕಾರಣದಿಂದಾಗಿ (ಷೇರುಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಣ ಮಾಡಿಕೊಳ್ಳುವುದು) ದೇಶದ ಹೂಡಿಕೆದಾರರು ನಷ್ಟ ಮಾಡಿಕೊಂಡಿದ್ದರ ಹಿಂದೆ ಕಾನೂನಿನ ಉಲ್ಲಂಘನೆ ಆಗಿದೆಯೇ ಎಂಬ ಬಗ್ಗೆ ಸೆಬಿ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳು ತನಿಖೆ ನಡೆಸಬೇಕು. ಕಾನೂನಿನ ಉಲ್ಲಂಘನೆ ಆಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪೀಠವು ತಾಕೀತು ಮಾಡಿದೆ.

ತಜ್ಞರ ಸಮಿತಿಯು ತನ್ನ ವರದಿಯಲ್ಲಿ ನೀಡುವ ಯಾವುದೇ ಸಲಹೆಯನ್ನು ಕೇಂದ್ರ ಸರ್ಕಾರ ಮತ್ತು ಸೆಬಿ ರಚನಾತ್ಮಕವಾಗಿ ಪರಿಗಣಿಸಿ, ಹೂಡಿಕೆದಾರರ ಹಿತ ಕಾಯಲು, ನಿಯಂತ್ರಣ ಕ್ರಮಗಳನ್ನು ಬಲಗೊಳಿಸಲು ಯಾವುದೇ ತೀರ್ಮಾನ ಕೈಗೊಳ್ಳಬಹುದು ಎಂದು ಕೋರ್ಟ್ ಹೇಳಿದೆ.

****

‘ಸೂಕ್ತ ಪ್ರಕರಣದಲ್ಲಿ ಈ ನ್ಯಾಯಾಲಯವು ತನಿಖೆಯನ್ನು ಎಸ್‌ಐಟಿ ಅಥವಾ ಸಿಬಿಐಗೆ ವರ್ಗಾಯಿಸುವ ಅಧಿಕಾರ ಹೊಂದಿದೆ. ಆದರೆ, ಇಂತಹ ಅಧಿಕಾರವನ್ನು ಅಸಾಮಾನ್ಯಸಂದರ್ಭಗಳಲ್ಲಿ ಮಾತ್ರ, ಸಂಬಂಧಪಟ್ಟ ತನಿಖಾ ಸಂಸ್ಥೆಯು ತನಿಖೆ ನಡೆಸುವಲ್ಲಿ ಎದ್ದು ಕಾಣುವಂತಹ ಉದ್ದೇಶಪೂರ್ವಕ ನಿಷ್ಕ್ರಿಯತೆಯನ್ನು ಪ್ರದರ್ಶಿಸಿದಾಗ ಬಳಸಬೇಕು’

  – ಸುಪ್ರೀಂ ಕೋರ್ಟ್‌

****

‘ಸತ್ಯಕ್ಕೆ ಸಂದ ಜಯ’

‘ಸತ್ಯಕ್ಕೆ ಜಯ ಸಂದಿದೆ. ಭಾರತದ ಅಭಿವೃದ್ಧಿಗೆ ನಮ್ಮ ಸಮೂಹದ ಕಂಪನಿಗಳ ಕೊಡುಗೆ ಮುಂದುವರಿಯಲಿದೆ’

–ಇದು ಹಿಂಡನ್‌ಬರ್ಗ್‌ ರೀಸರ್ಚ್‌ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಬಗ್ಗೆ ಉದ್ಯಮಿ ಗೌತಮ್‌ ಅದಾನಿ ನೀಡಿದ ಪ್ರತಿಕ್ರಿಯೆ. ‘ಸತ್ಯಮೇವ ಜಯತೆ. ನಮ್ಮ ಸಮೂಹದೊಟ್ಟಿಗೆ ನಿಂತ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ’ ಎಂದು ಅವರು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.