ಬೆಂಗಳೂರು: ಎಲ್‌ಅಂಡ್‌ಟಿ ಕಂಪನಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರ ವಾರಕ್ಕೆ 90 ಗಂಟೆಗಳ ದುಡಿಮೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸೀರಂ ಕಂಪನಿಯ ಸಿಇಒ ಆದಾರ್ ಪೂನಾವಾಲಾ, ‘ಭಾನುವಾರದಂದು ನನ್ನನ್ನೇ ನೋಡುತ್ತಾ ಕುಳಿತಿರಲು ನನ್ನ ಪತ್ನಿ ಇಷ್ಟಪಡುತ್ತಾಳೆ’ ಎಂದು ಹೇಳಿದ್ದಾರೆ.
'ಮನೆಯಲ್ಲೇ ಇದ್ದು ಹೆಂಡತಿಯನ್ನು ಎಷ್ಟೂ ಅಂತ ನೋಡುತ್ತೀರಿ’ ಎಂದು ಕಂಪನಿಯ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಸುಬ್ರಹ್ಮಣ್ಯನ್, ‘ಮನೆಯಲ್ಲಿ ಕಡಿಮೆ ಸಮಯ ಕಳೆಯಿರಿ. ಕಚೇರಿಯಲ್ಲಿ ಹೆಚ್ಚು ದುಡಿಮೆಯಲ್ಲಿ ತೊಡಗಿಸಿಕೊಳ್ಳಿ’ ಎಂದಿದ್ದರು.
ಈ ಹೇಳಿಕೆಗೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಉದ್ಯಮಿ ಆನಂದ್ ಮಹೀಂದ್ರಾ, ‘ನನ್ನ ಪತ್ನಿ ಅದ್ಭುತ ವ್ಯಕ್ತಿಯಾಗಿದ್ದು, ಅವಳನ್ನು ನೋಡುತ್ತಾ ಕುಳಿತಿರಲು ನನಗೆ ತುಂಬಾ ಇಷ್ಟ’ ಎಂದು ಹೇಳಿದ್ದರು.
ಆನಂದ್ ಮಹೀಂದ್ರಾ ಅವರ ಹೇಳಿಕೆಯನ್ನು ಪುನರುಚ್ಛರಿಸಿರುವ ಆದಾರ್ ಪೂನಾವಾಲಾ, ‘ಹೌದು ಮಹೀಂದ್ರಾ ಅವರೇ.... ನಾನೊಬ್ಬ ಅದ್ಭುತ ವ್ಯಕ್ತಿಯೆಂದು ನನ್ನ ಪತ್ನಿ ನಟಾಶಾ ಭಾವಿಸಿದ್ದು, ಭಾನುವಾರದಂದು ನನ್ನನ್ನೇ ನೋಡುತ್ತಾ ಕುಳಿತಿರಲು ಇಷ್ಟಪಡುತ್ತಾಳೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎನ್ನುವುದಕ್ಕಿಂತ ಕೆಲಸದ ಗುಣಮಟ್ಟ ಎಷ್ಟಿದೆ ಎಂಬುವುದು ಮುಖ್ಯ. ವೃತ್ತಿ ಮತ್ತು ಬದುಕಿನ ನಡುವೆ ಸಮತೋಲನದ ಅಗತ್ಯವಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.