
ಅಖಿಲೇಶ್ ಯಾದವ್
ಕೃಪೆ: ಪಿಟಿಐ
ಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಜಾತಿ ವಿವರವನ್ನೂ ಸಂಗ್ರಹಿಸಬೇಕು. ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅದು ಅಗತ್ಯ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ ಹೇಳಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅಖಿಲೇಶ್, ಅಧಿಕಾರಿಗಳು ಎಸ್‌ಐಆರ್ ವೇಳೆ ಮತದಾರರ ಮಾಹಿತಿ ಪಡೆಯಲು ಮನೆ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಅದೇ ವೇಳೆ ಜಾತಿ ದತ್ತಾಂಶ ಸಂಗ್ರಹಿಸಲು ಉತ್ತಮ ಅವಕಾಶವಿದೆ ಎಂದಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ವರ್ಷದ ಜಯಂತಿ ಪ್ರಯುಕ್ತ ಎಸ್‌ಪಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳೆ ಅವರು, 'ಇಷ್ಟು ದೊಡ್ಡ ಕಾರ್ಯಕ್ರಮ ಪ್ರಗತಿಯಲ್ಲಿದೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಅಧಿಕಾರಿಗಳು ಪ್ರತಿಯೊಂದು ಮನೆಗೂ ಭೇಟಿ ನೀಡುತ್ತಿದ್ದಾರೆ. ಜಾತಿ ಮಾಹಿತಿಯನ್ನೂ ಸಂಗ್ರಹಿಸಲು ಒಂದೇಒಂದು ಹೆಚ್ಚುವರಿ ಕಾಲಂ ಸೇರಿಸಬೇಕಿದೆ' ಎಂದಿದ್ದಾರೆ.
'ಪೂರ್ಣಪ್ರಮಾಣದಲ್ಲಿ ಜಾತಿಗಣತಿ ಮಾಡಲು ಆಗದಿದ್ದರೂ, ಪ್ರಾಥಮಿಕವಾಗಿ ಜಾತಿ ಎಣಿಕೆ ಮಾಡಬಹುದಾಗಿದೆ' ಎಂದು ಪ್ರತಿಪಾದಿಸಿರುವ ಅವರು, ಆ ಅಂಕಿ–ಅಂಶಗಳು ಭವಿಷ್ಯದಲ್ಲಿ ಸಾರ್ವಜನಿಕ ನೀತಿಗಳನ್ನು ಜಾರಿಗೊಳಿಸಲು, ಸಾಮಾಜಿಕ ನ್ಯಾಯಕ್ಕೆ ಅನುಸಾರವಾಗಿ ಎಲ್ಲ ವರ್ಗಗಳಿಗೂ ತಲುಪುವಂತಹ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೆರವಾಗಲಿದೆ ಎಂದು ಒತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.