ADVERTISEMENT

ಶಿಕ್ಷೆ ಪ್ರಕಟಕ್ಕೂ ಮುನ್ನ ಹೆಚ್ಚುವರಿ ಆರೋಪಿಗೆ ಸಮನ್ಸ್‌ ನೀಡಬಹುದು– ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 19:01 IST
Last Updated 5 ಡಿಸೆಂಬರ್ 2022, 19:01 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಗೆ ಶಿಕ್ಷೆ ಪ್ರಕಟಿಸುವುದಕ್ಕೂ ಮುನ್ನ ಹೆಚ್ಚುವರಿ ಆರೋಪಿಗೆ ಸಮನ್ಸ್‌ ಜಾರಿ ಮಾಡಬಹುದು. ಅಪರಾಧ ದಂಡ ಸಂಹಿತೆ (ಸಿಪಿಸಿ) 319ರಲ್ಲಿನ ವಿಶೇಷ ಅಧಿಕಾರವನ್ನು ನ್ಯಾಯಾಲಯ ಚಲಾಯಿಸಬಹುದು ಎಂದು ಸುಪ್ರೀಂಕೋರ್ಟ್‌ ಸೋಮವಾರ ತಿಳಿಸಿದೆ.

ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ಕುರಿತು ನ್ಯಾಯಾಲಯ ಅನುಸರಿಸುವ ಮಾರ್ಗಸೂಚಿಯನ್ನು ಹೊರಡಿಸಿತು.

ವಿಚಾರಣೆ ಸಂದರ್ಭದಲ್ಲಿ ದೊರೆಯುವ ಹೊಸ ಸಾಕ್ಷ್ಯಗಳಿಂದ ಯಾವುದೇ ಇತರ ವ್ಯಕ್ತಿ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನ್ಯಾಯಾಲಯ ಕಂಡುಕೊಂಡರೆ, ನ್ಯಾಯಾಲಯವೇ ಸ್ವಯಂ ಪ್ರೇರಿತವಾಗಿ ಹೆಚ್ಚುವರಿ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಬಹುದು ಅಥವಾ ಆ ಸಂಬಂಧ ಅರ್ಜಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ADVERTISEMENT

ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಎ.ಎಸ್‌.ಬೋಪಣ್ಣ, ವಿ. ರಾಮಸುಬ್ರಮಣಿಯನ್‌ ಮತ್ತು ಬಿ.ವಿ. ನಾಗರತ್ನ ಅವರನ್ನೂ ಒಳಗೊಂಡಿರುವ ಸಾಂವಿಧಾನಿಕ ಪೀಠವು, ‘ಯಾವುದೇ ಅಪರಾಧ ಪ್ರಕರಣದ ವಿಚಾರಣೆಯು ಶಿಕ್ಷೆ ಪ್ರಕಟವಾದ ಬಳಿಕವಷ್ಟೇ ಪೂರ್ಣಗೊಳ್ಳುತ್ತದೆ’ ಎಂದು ಹೇಳಿದೆ.

ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಶಿಕ್ಷೆ ವಿಧಿಸಿದ ದಿನದಂದೇ ಹೆಚ್ಚುವರಿ ಆರೋಪಿಗೆ ಸಮನ್ಸ್‌ ನೀಡಿದ್ದ ಕುರಿತ ವಿಷಯ ಸಾಂವಿಧಾನಿಕ ಪೀಠದ ಮುಂದೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.