ADVERTISEMENT

ಮತ್ತೆ ಮುನಿಸಿಕೊಂಡ ಸುವೇಂದು

ಪಿಟಿಐ
Published 3 ಡಿಸೆಂಬರ್ 2020, 11:26 IST
Last Updated 3 ಡಿಸೆಂಬರ್ 2020, 11:26 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತ್ತ: ‘ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಯಕತ್ವದ ವಿರುದ್ಧ ಮತ್ತೆ ಮುನಿಸಿಕೊಂಡಿದ್ದಾರೆ’ ಎಂದು ಅವರ ಆಪ್ತರು ಹೇಳಿದ್ದಾರೆ.

‘ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೇಂದು ಅವರ ಮನವೊಲಿಸಲಾಗಿದ್ದು ಅವರು ಪಕ್ಷದಲ್ಲೇ ಮುಂದುವರಿಯಲಿದ್ದಾರೆ’ ಎಂದು ಟಿಎಂಸಿ ಸಂಸದ ಸೌಗತಾ ರಾಯ್‌ ಬುಧವಾರ ತಿಳಿಸಿದ್ದರು.

ಸೌಗತಾ ರಾಯ್‌, ಅಭಿಷೇಕ್‌ ಮುಖರ್ಜಿ, ಸುದೀಪ್‌ ಬಂಡೋಪಾಧ್ಯಾಯ ಮತ್ತು ಪ್ರಶಾಂತ್‌ ಕಿಶೋರ್‌ ಅವರನ್ನೊಳಗೊಂಡ ತಂಡವು ಮಂಗಳವಾರ ರಾತ್ರಿ ಸುವೇಂದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು.

ADVERTISEMENT

‘ಪಕ್ಷದೊಳಗೆ ತಲೆದೋರಿದ್ದ ಬಿಕ್ಕಟ್ಟು ಶಮನವಾಗಿದೆ. ಸುವೇಂದು, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ. ಕೆಲವರು ಪಕ್ಷ ಒಡೆಯುವ ಕೆಲಸಕ್ಕೆ ಮುಂದಾಗಿದ್ದು ಅವರ ಕಾರ್ಯ ಫಲಿಸುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡುತ್ತೇವೆ’ ಎಂದು ರಾಯ್‌ ಹೇಳಿದ್ದರು.

‘ಮಂಗಳವಾರ ನಡೆದ ರಹಸ್ಯ ಸಭೆಯ ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡದಿರುವುದರಿಂದ ಸುವೇಂದು ಮತ್ತೆ ಬೇಸರಗೊಂಡಿದ್ದಾರೆ’ ಎಂದು ಹೇಳಲಾಗಿದೆ.

2011ರಲ್ಲಿ ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೇರಲು ಕಾರಣವಾಗಿದ್ದ ‘ನಂದಿ ಗ್ರಾಮ ಚಳವಳಿಯ’ ಪ್ರಮುಖ ನಾಯಕರಾಗಿದ್ದ ಸುವೇಂದು, ಸಚಿವ ಸ್ಥಾನ ತೊರೆದ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.