ADVERTISEMENT

ಬಯೊಮೆಟ್ರಿಕ್‌ ದತ್ತಾಂಶ ನೀಡಲು ಆದಿವಾಸಿ, ಮುಸ್ಲಿಮರ ಹಿಂಜರಿಕೆ

ಸಮೀಕ್ಷಾ ವರದಿಯೊಂದರಲ್ಲಿ ಉಲ್ಲೇಖ; ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ವಿರೋಧ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 14:42 IST
Last Updated 2 ಏಪ್ರಿಲ್ 2023, 14:42 IST
.
.   

ನವದೆಹಲಿ: ಆಡಳಿತ ವ್ಯವಸ್ಥೆ ಬಗ್ಗೆ ಇರುವ ‘ಅಪನಂಬಿಕೆ’ ಕಾರಣದಿಂದಾಗಿ ಆದಿವಾಸಿ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಪರಾಧಿಗಳು, ವಿಚಾರಣಾಧೀನ ಕೈದಿಗಳು ಹಾಗೂ ಬಂಧಿತರು ತಮ್ಮ ಬಯೊಮೆಟ್ರಿಕ್‌ ದತ್ತಾಂಶವನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ.

ಕಾಮನ್‌ ಕಾಸ್‌ ಆ್ಯಂಡ್‌ ಲೋಕ್‌ನೀತಿ– ಸೆಂಟರ್‌ ಫಾರ್‌ ಸ್ಟಡಿ ಡೆವೆಲಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಸಂಸ್ಥೆಯು ಸಿದ್ಧಪಡಿಸಿರುವ ‘ಭಾರತದಲ್ಲಿ ಪೊಲೀಸ್‌ಗಿರಿಯ ಸ್ಥಿತಿಗತಿ ವರದಿ 2023: ಕಣ್ಗಾವಲು ಮತ್ತು ಖಾಸಗಿತನದ ಪ್ರಶ್ನೆ’ ಎಂಬ ಸಮೀಕ್ಷಾ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

‘ಕೆಲ ಸಮುದಾಯಗಳ ಜನಸಂಖ್ಯೆಗೆ ಹೋಲಿಸಿದರೆ ಅವರು ಬಂಧನಕ್ಕೆ ಒಳಗಾಗುತ್ತಿರುವ ಪ್ರಮಾಣವು ಇತರರಿಗಿಂತ ಬಹಳ ಹೆಚ್ಚು ಇದೆ. ಈ ಕಾರಣದಿಂದಾಗಿಯೇ ದತ್ತಾಂಶ ನೀಡಲು ಕೆಲ ಸಮುದಾಯಗಳು ಹಿಂಜರಿಯುತ್ತಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ ಜನರಲ್ಲಿ ಶೇ 56ರಷ್ಟು ಹಾಗೂ ಕರ್ನಾಟಕದ ಜನರಲ್ಲಿ ಶೇ 54ರಷ್ಟು ಮಂದಿ ಬಯೊ‌ಮೆಟ್ರಿಕ್‌ ದತ್ತಾಂಶವನ್ನು ಪೊಲೀಸರು ಪಡೆಯುವ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎರಡು ರಾಜ್ಯಗಳಲ್ಲಿ ಅತಿ ಹೆಚ್ಚು ಜನರು ವಿರೋಧ ವ್ಯಕ್ತಪಡಿಸಿದ್ದು, ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿ ಇವೆ.

ಬಯೊಮೆಟ್ರಿಕ್‌ ದತ್ತಾಂಶವನ್ನು ಸಂಗ್ರಹಿಸಲು, ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಕಾಯ್ದೆ 2022ರಲ್ಲಿ ಅವಕಾಶ ನೀಡಲಾಗಿದೆ. ಈ ಕಾರಣಕ್ಕಾಗಿಯೇ ಸಾಮಾಜಿಕ ಕಾರ್ಯಕರ್ತರು ಈ ಕಾಯ್ದೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.

ನಿರ್ದಿಷ್ಟ ಸಮುದಾಯದ ಜನರನ್ನು ಬಂಧಿಸುವ ಪ್ರಮಾಣ ಹೆಚ್ಚಿರುವುದೂ ದತ್ತಾಂಶ ನೀಡಲು ಹಿಂಜರಿಯುತ್ತಿರುವುದರ ಮತ್ತೊಂದು ಪ್ರಮುಖ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. ಉಳಿದವರಿಗೆ ಹೋಲಿಸಿದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಮುಸ್ಲಿಂ ಸಮುದಾಯದವರು ಜೈಲಿಗೆ ಹೋಗುವ ಪ್ರಮಾಣ ಹೆಚ್ಚಿರುತ್ತದೆ ಎಂಬ ಅಧಿಕೃತ ದಾಖಲೆಗಳ ಮಾಹಿತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದಿವಾಸಿಗಳ ಹಿಂಜರಿಕೆ ಯಾಕಾಗಿ?
ಅಭಿವೃದ್ಧಿ ಹೆಸರಲ್ಲಿ ಸರ್ಕಾರವು ಆದಿವಾಸಿಗಳ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಅಣೆಕಟ್ಟು ಕಟ್ಟುತ್ತದೆ. ಇದರಿಂದಾಗಿ ಸ್ವಂತ ಜಾಗವನ್ನು ಬಿಟ್ಟು ಬೇರೆಡೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯ ಸೃಷ್ಟಿಯಾಗುತ್ತದೆ. ಆದ್ದರಿಂದ ಸರ್ಕಾರದ ಅತಿಕ್ರಮಣವನ್ನು ಆದಿವಾಸಿಗಳು ವಿರೋಧಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದಕ್ಕಾಗಿ, ಇರುವ ಕಾನೂನುಗಳ ಮೂಲಕ ಆದಿವಾಸಿಗಳನ್ನು ಬಂಧಿಸಿ, ಅವರ ಮೇಲೆ ‘ಸುಳ್ಳು’ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ‘ನಮ್ಮನ್ನು ಹೆಚ್ಚಾಗಿ ನಕ್ಸಲ್‌ ಸಂಬಂಧಿತ ಕಾನೂನಿನ ಅಡಿಯಲ್ಲಿ ಬಂಧಿಸಲಾಗುತ್ತದೆ’ ಎಂದು ಶೇ 28ರಷ್ಟು ಆದಿವಾಸಿಗಳು ‘ಭಾರತದಲ್ಲಿ ಪೊಲೀಸ್‌ಗಿರಿಯ ಸ್ಥಿತಿಗತಿ ವರದಿ 2018’ರ ಸಮೀಕ್ಷೆಯಲ್ಲಿ ಹೇಳಿದ್ದರು.

‘ಇಂಥ ಸಂದರ್ಭಗಳಲ್ಲಿ ಸರ್ಕಾರವನ್ನು ವಿರೋಧಿಸುವ ಆದಿವಾಸಿಗಳ ಮೇಲೆ ಕಣ್ಗಾವಲು ಇರಿಸಲು ಬಯೊಮೆಟ್ರಿಕ್‌ ದತ್ತಾಂಶಗಳನ್ನು ಬಳಸಿಕೊಳ್ಳುತ್ತದೆ’ ಎಂದು ಆದಿವಾಸಿಗಳು ಹೇಳುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ದತ್ತಾಂಶ ಸಂಗ್ರಹವನ್ನು ವಿರೋಧಿಸುವವರು
ಸಮುದಾಯ; ಶೇಕಡಾವಾರು

ಆದಿವಾಸಿಗಳು; 44
ಸಾಮಾನ್ಯ ವರ್ಗ; 28
ದಲಿತರು; 34
ಹಿಂದುಳಿತ ವರ್ಗ; 31

ದತ್ತಾಂಶ ಸಂಗ್ರಹಕ್ಕೆ ಕನಿಷ್ಠ ಬೆಂಬಲ
ಧರ್ಮ;ಶೇಕಡಾವಾರು

ಮುಸ್ಲಿಂ; 39
ಹಿಂದೂ; 50
ಕ್ರೈಸ್ತ; 44
ಸಿಖ್‌; 43

ದತ್ತಾಂಶ ಸಂಗ್ರಹದ ಪರ ಇರುವವರು
ಸಮುದಾಯ;ಶೇಕಡಾವಾರು

ಸಾಮಾನ್ಯ ವರ್ಗ; 50
ಹಿಂದುಳಿದ ವರ್ಗ; 50
ದಲಿತರು; 42
ಆದಿವಾಸಿಗಳು; 39

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.