ADVERTISEMENT

ಪ್ರತಿಕೂಲ ಸಿಬಿಲ್‌ ಸ್ಕೋರ್ ವರದಿ: ಕೈ ತಪ್ಪಿದ ಬ್ಯಾಂಕ್‌ ಉದ್ಯೋಗ!

ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:27 IST
Last Updated 26 ಜೂನ್ 2025, 16:27 IST
ಎಸ್‌ಬಿಐ
ಎಸ್‌ಬಿಐ   

ಚೆನ್ನೈ: ಪ್ರತಿಕೂಲ ಸಿಬಿಲ್ ಕ್ರೆಡಿಟ್‌ ಸ್ಕೋರ್‌ ವರದಿ ಹೊಂದಿದ ವ್ಯಕ್ತಿಗೆ ಸರ್ಕಲ್‌ ಬೇಸಡ್‌ ಆಫೀಸರ್‌(ಸಿಬಿಒ) ಹುದ್ದೆಯ ನೇಮಕಾತಿ ರದ್ದುಗೊಳಿಸಿದ್ದ ಸ್ಟೇಟ್‌ ಬ್ಯಾಂಕ್‌ ಆಪ್‌ ಇಂಡಿಯಾ (ಎಸ್‌ಬಿಐ) ನಿರ್ಧಾರದ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿದೆ. 

ಆರ್ಥಿಕ ಅಶಿಸ್ತು ಹೊಂದಿದ ವ್ಯಕ್ತಿಯು ಸಾರ್ವಜನಿಕರ ಹಣದ ರಕ್ಷಣೆ ಮಾಡಲು ಅಸಮರ್ಥ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಸಾಲ ಮರುಪಾವತಿಯನ್ನು ವಿಳಂಬ ಮಾಡಿದ್ದರಿಂದ ಅರ್ಜಿದಾರ ಪಿ. ಕಾರ್ತಿಕೇಯನ್‌ ಅವರ ‘ಸಿಬಿಲ್‌ ಸ್ಕೋರ್‌‘ ಋಣಾತ್ಮಕವಾಗಿತ್ತು. ಈ ವರದಿಯನ್ನು ಆಧರಿಸಿ, ಎಸ್‌ಬಿಐ ಅವರಿಗೆ ನೀಡಿದ್ದ ನೇಮಕಾತಿ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಕಾರ್ತಿಕೇಯನ್‌ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ADVERTISEMENT

‘ಸಿಬಿಲ್‌ ವರದಿ ಪ್ರಕಾರ, ಕಾರ್ತಿಕೇಯನ್ ಆರ್ಥಿಕ ಅಶಿಸ್ತು ಹೊಂದಿರುವುದು ಕಂಡುಬಂದಿದೆ. ಉದ್ಯೋಗದಾತ ಸಂಸ್ಥೆಯು ಪ್ರಕಟಿಸಿದ್ದ ನೇಮಕಾತಿ ನಿಯಾಮವಳಿ ಪ್ರಕಾರ, ನೇಮಕಾತಿಗೂ ಮೊದಲೇ ಅರ್ಜಿದಾರರಿಗೆ  ಉದ್ಯೋಗದ ಅರ್ಹತೆಯ ಷರತ್ತುಗಳನ್ನು ಸ್ಪಷ್ಟಪಡಿಸಲಾಗಿತ್ತು’ ಎಂದು ಎಸ್‌ಬಿಐ ಪರ ವಕೀಲರು ವಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ತಿಯೇನ್‌ ‍ಪರ ವಕೀಲರು, ‘ಹುದ್ದೆಯ ಅಧಿಸೂಚನೆ ಹೊರಡಿಸುವ ವೇಳೆ ಅರ್ಜಿದಾರರ ಯಾವುದೇ ಬಾಕಿ ಅಥವಾ ಸಿಬಿಲ್‌ ಪ್ರತಿಕೂಲ ವರದಿ ಹೊಂದಿರಲಿಲ್ಲ. ಅಲ್ಲದೇ, ಕ್ರೆಡಿಟ್‌ ಕಾರ್ಡ್‌ನ ಎಲ್ಲ ಬಾಕಿಯನ್ನು ಪಾವತಿಸಿದ್ದು, ಸಿಬಿಲ್‌ ಕೂಡ ಬಾಕಿದಾರ ಎಂದು ಪರಿಗಣಿಸಿಲ್ಲ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಮಾಲಾ,  ‘ಸಾಲ ಮರುಪಾವತಿ ಅತ್ಯಂತ ಕೆಟ್ಟ ಇತಿಹಾಸ ಹಾಗೂ ಕಡಿಮೆ ಸಿಬಿಲ್‌ ಸ್ಕೋರ್‌ ಹೊಂದಿದ ಕಾರಣ, ಅರ್ಜಿದಾರರ ನೇಮಕಾತಿಯನ್ನು ರದ್ದುಗೊಳಿಸಿದ್ದನ್ನು ಎಸ್‌ಬಿಐ ಸಮರ್ಥಿಸಿಕೊಂಡಿದೆ.  ಈ ವಿಷಯದಲ್ಲಿ ನಡೆದ ವಿಚಾರಣೆ ಆಧರಿಸಿ, ಅರ್ಜಿದಾರರ ರಿಟ್‌ ಅರ್ಜಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ,  ಹೀಗಾಗಿ ರಿಟ್‌ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.