ADVERTISEMENT

ಬಾಯ್ಸ್‌ ಲಾಕರ್‌ ರೂಮ್: ಸ್ವಯಂಪ್ರೇರಿತ ವಿಚಾರಣೆಗಾಗಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಪಿಟಿಐ
Published 6 ಮೇ 2020, 13:14 IST
Last Updated 6 ಮೇ 2020, 13:14 IST
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್   

ನವದೆಹಲಿ: ಬಾಲಕಿಯರ ಕುರಿತು ಅಶ್ಲೀಲ ಚಾಟ್‌ ಮತ್ತು ವಿರೂಪಗೊಳಿಸಿದ ಅವರ ಚಿತ್ರಗಳನ್ನು ಹಂಚಿಕೊಂಡಿರುವ ‘ಬಾಯ್ಸ್‌ ಲಾಕರ್‌ ರೂಮ್ಸ್‌’ ಇನ್‌ಸ್ಟಾಗ್ರಾಂ ಗ್ರೂಪ್‌ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸುವಂತೆ ವಕೀಲರಿಬ್ಬರು ದೆಹಲಿ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರನ್ನು ಒತ್ತಾಯಿಸಿದ್ದಾರೆ.

ವಕೀಲರಾದ ನೀಲಾ ಗೋಖಲೆ ಹಾಗೂ ಇಳಂ ಪರಿಧಿ ಎಂಬುವವರು ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

‘ಬಾಲಕಿಯರು ಸೇರಿದಂತೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು, ಅವರಿಗೆ ಲೈಂಗಿಕ ಕಿರುಕುಳ ನೀಡುವುದು ಹೇಗೆ ಎಂಬ ಬಗ್ಗೆ ಈ ಗ್ರೂಪ್‌ನಲ್ಲಿ ಚರ್ಚೆ ನಡೆದಿದೆ. ವಿಷಯದ ಗಂಭೀರತೆಯೇ ನಮಗೆ ಈ ಪತ್ರ ಬರೆಯುವಂತೆ ಮಾಡಿದೆ’ ಎಂದೂ ಅವರು ವಿವರಿಸಿದ್ದಾರೆ.

ADVERTISEMENT

‘ಈ ವಿಷಯ ಬಹಿರಂಗಗೊಳ್ಳುತ್ತಿರುವಂತೆಯೇ, ಗ್ರೂಪ್‌ನಿಂದ ಹೊರ ನಡೆಯುವಂತೆ ಎಲ್ಲರಿಗೂ ಸೂಚಿಸಲಾಗಿದೆ. ‘ಬಾಯ್ಸ್‌ ಲಾಕರ್‌ ರೂಂ–2 ಎಂಬ ಮತ್ತೊಂದು ಗ್ರೂಪ್‌ ರಚಿಸಿ, ಅದರ ಸದಸ್ಯರಾಗುವಂತೆಯೂ ತಿಳಿಸಲಾಗಿದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.