ADVERTISEMENT

27ರಂದು ಭಾರತಕ್ಕೆ ಅಫ್ಗನ್‌ ಸೇನಾ ಮುಖ್ಯಸ್ಥ ಭೇಟಿ ಸಂಭವ

ಪಿಟಿಐ
Published 20 ಜುಲೈ 2021, 10:15 IST
Last Updated 20 ಜುಲೈ 2021, 10:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಅಫ್ಗಾನಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ವಾಲಿ ಮೊಹಮ್ಮದ್‌ ಅಹ್ಮದ್ಜೈ ಅವರು ಇದೇ 27ರಿಂದ ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ’ ಎಂದು ಮೂಲಗಳು ಮಂಗಳವಾರ ಹೇಳಿವೆ.

‘ಅಫ್ಗಾನಿಸ್ತಾನದಿಂದ ವಿದೇಶಿ ಸೇನೆಗಳು ಹಿಂತಿರುಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ತಾಲಿಬಾನ್‌ ಉಪಟಳ ಹೆಚ್ಚಾಗಿದೆ. ಹಾಗಾಗಿ ತಾಲಿಬಾನ್‌ ಸಂಘಟನೆಯನ್ನು ಎದುರಿಸಲು ದ್ವಿಪಕ್ಷೀಯ ಸೇನಾ ಸಂಬಂಧವನ್ನು ವೃದ್ಧಿಗೊಳಿಸುವುದು ಈ ಭೇಟಿಯ ಮೂಲ ಉದ್ದೇಶವಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಈ ಪ್ರವಾಸದ ವೇಳೆ ಜನರಲ್‌ ಅಹ್ಮದ್ಜೈ ಅವರು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಮತ್ತು ರಾಷ್ಟ್ರೀಯ ಭದ್ರತಾ ಸಲೆಹಗಾರ ಅಜಿತ್‌ ಡೊಭಾಲ್‌ ಸೇರಿದಂತೆ ಉನ್ನತ ಸೇನಾ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ.ಜುಲೈ 27 ರಂದು ಇಲ್ಲಿಗೆ ಬರುವ ಜನರಲ್‌ ಅಹ್ಮದ್ಜೈ ಅವರು ಜುಲೈ 30ರಂದು ವಾಪಸ್ಸಾಗಬಹುದು’ ಎಂದು ಮೂಲಗಳು ಹೇಳಿವೆ.

ADVERTISEMENT

‘ಭೇಟಿಯ ವೇಳೆ ಜನರಲ್‌ ಅಹ್ಮದ್ಜೈ ಅವರು ಅಫ್ಗನ್‌ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತದ ನೆರವು ಕೋರುವ ಸಾಧ್ಯತೆಗಳಿವೆ’ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.