ADVERTISEMENT

ಸತತ ಎರಡನೇ ವರ್ಷ ಕೇರಳದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ: ಆಕ್ರೋಶ 

ಪಿಟಿಐ
Published 3 ಜನವರಿ 2020, 13:57 IST
Last Updated 3 ಜನವರಿ 2020, 13:57 IST
   

ತಿರುವನಂತಪುರ: ನವದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಕೇರಳವು ಕಳುಹಿಸಿದ್ದ ಸ್ತಬ್ಧಚಿತ್ರ ಪ್ರಸ್ತಾವನೆ ಸತತ ಎರಡನೇ ವರ್ಷ ತಿರಸ್ಕೃತಗೊಂಡಿದೆ.

ಈ ಕ್ರಮವು ‘ರಾಜಕೀಯ ಪ್ರೇರಿತ’ ಎಂದು ಕೇಂದ್ರದ ವಿರುದ್ಧ ಕೇರಳ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ‘ರಕ್ಷಣಾ ಇಲಾಖೆ ರಾಜ್ಯದ ಪ್ರಸ್ತಾವನೆಯನ್ನು ಮೂರನೇ ಬಾರಿ ಪರಿಶೀಲನೆ ನಡೆಸುವಾಗ ತಿರಸ್ಕರಿಸಿದೆ. ಹಿನ್ನೀರು, ಕಥಕ್ಕಳಿ, ಬೋಟ್‌ ಮುಂತಾದ ವಿಷಯವಿರಿಸಿಕೊಂಡು ಅದ್ಭುತವಾದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ನಾವು ನೀಡಿದ್ದೆವು. ಆದರೆ ಕೇರಳದ ಬಗ್ಗೆ ಏಕಿಷ್ಟು ದ್ವೇಷ ಎನ್ನುವುದು ತಿಳಿದಿಲ್ಲ. ಪದ್ಮ ಪ್ರಶಸ್ತಿ ಸಂದರ್ಭದಲ್ಲೂ ಕೇರಳದ ಶಿಫಾರಸನ್ನು ಕೇಂದ್ರ ತಿರಸ್ಕರಿಸಿತ್ತು’ ಎಂದು ಸಂಸ್ಕೃತಿ ಸಚಿವ ಎ.ಕೆ.ಬಾಲನ್‌ ಹೇಳಿದರು.

‘ಕೇರಳ ಅಥವಾ ಮಲಯಾಳಿ ಎಂದು ಕೇಳಿದಾಕ್ಷಣ ಕೇಂದ್ರ ಸರ್ಕಾರ ಕೋಪಗೊಳ್ಳುವುದು ಏಕೆ? ಸ್ತಬ್ಧಚಿತ್ರದಲ್ಲಿ ಯಾವುದೇ ರಾಜಕೀಯ ವಿಷಯವಿರಲಿಲ್ಲ. ರಾಜಕೀಯ ದುರುದ್ದೇಶವಿರದೇ ಸ್ತಬ್ಧಚಿತ್ರ ತಿರಸ್ಕರಿಸುವುದಕ್ಕೆ ಸಾಧ್ಯವಿಲ್ಲ. ಈ ಮೂಲಕ ಬಿಜೆಪಿ ಮತದಾರರನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆಯೇ’ ಎಂದು ಬಾಲನ್‌ ಪ್ರಶ್ನಿಸಿದರು.

ADVERTISEMENT

ಹೊಸದೇನೂ ಇರಲಿಲ್ಲ: ‘ಕೇರಳದ ಸ್ತಬ್ಧಚಿತ್ರದಲ್ಲಿ ಹೊಸ ವಿಷಯವೇನೂ ಇರಲಿಲ್ಲ. ಬೋಟ್‌ರೇಸ್‌, ಪುಲಿಕಳಿ ಮುಂತಾದುವುಗಳನ್ನು ಹಲವು ಬಾರಿ ವೀಕ್ಷಿಸಿದ್ದೇವೆ’ ಎಂದು ಆಯ್ಕೆ ಸಮಿತಿಯ ಸದಸ್ಯರಾದ ಜಯಪ್ರಭ ಮೆನನ್‌ ತಿಳಿಸಿದರು. ‘ಆಯ್ಕೆ ಸಮಿತಿಯಲ್ಲಿ ಯಾವುದೇ ರಾಜಕೀಯವಿರಲಿಲ್ಲ’ ಎಂದು ಮೆನನ್‌ ಸ್ಪಷ್ಟನೆ ನೀಡಿದ್ದಾರೆ.

ಕೇರಳದ ಜೊತೆಗೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರದ ಸ್ತಬ್ಧಚಿತ್ರಗಳನ್ನೂ ಕೇಂದ್ರ ತಿರಸ್ಕರಿಸಿದೆ. ಒಟ್ಟು 56 ಪ್ರಸ್ತಾವನೆಗಳ ಪೈಕಿ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಹಾಗೂ 6 ಕೇಂದ್ರ ಸಚಿವಾಲಯದ ಸ್ತಬ್ಧಚಿತ್ರಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.