ADVERTISEMENT

ಒಡಿಶಾದಲ್ಲಿ ರಷ್ಯಾ ಪ್ರಜೆ ನಾಪತ್ತೆ

ಪಿಟಿಐ
Published 31 ಡಿಸೆಂಬರ್ 2022, 14:30 IST
Last Updated 31 ಡಿಸೆಂಬರ್ 2022, 14:30 IST
.
.   

ಭುವನೇಶ್ವರ: ಸಂಸದ ಸೇರಿ ರಷ್ಯಾದ ಇಬ್ಬರು ಪ್ರಜೆಗಳ ಅಸಹಜ ಸಾವಿನ ಬೆನ್ನಲ್ಲೆ ಅಲ್ಲಿನ ಮತ್ತೊಬ್ಬ ಪ್ರಜೆ ಕೂಡ ಒಡಿಶಾದಲ್ಲಿ ನಾಪತ್ತೆಯಾಗಿದ್ದು, ಪೊಲೀಸರು ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಪತ್ತೆಯಾಗಿರುವ ವ್ಯಕ್ತಿ ಪುರಿಯಲ್ಲಿ ತಂಗಿದ್ದು, ಉಕ್ರೇನ್‌ ಯುದ್ಧ ವಿರೋಧಿ ಕಾರ್ಯಕರ್ತರಾಗಿದ್ದರು. ಅವರು ಪುಟಿನ್‌ ವಿರೋಧಿ ಘೋಷಣೆಗಳಿದ್ದ ಫಲಕವನ್ನು ಹಿಡಿದು ಹಣಕಾಸಿನ ನೆರವು ಕೋರಿದ್ದರು ಎಂದೂ ಹೇಳಿವೆ.

ರಷ್ಯಾದ ಸಂಸದ ಪಾವೆಲ್‌ ಆ್ಯಂಥವ್‌ ಹಾಗೂ ವಕೀಲ ವಾಡ್ಲಿಮಿರ್‌ ಬಿದೆವೊ ಅವರು ರಾಯಗಡದ ಹೋಟೆಲೊಂದರಲ್ಲಿ ಈಚೆಗೆ ಅಸಹಜವಾಗಿ ಸಾವಿಗಿಡಾಗಿದ್ದರು. ಪಾವೆಲ್‌ ಅವರು ಕೂಡ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಟೀಕಾಕಾರರಾಗಿದ್ದರು.

ADVERTISEMENT

ನಾಪತ್ತೆಯಾಗಿರುವ ವ್ಯಕ್ತಿಯು ತಿಂಗಳ ಹಿಂದೆ ಭುವನೇಶ್ವರ ರೈಲು ನಿಲ್ದಾಣದಲ್ಲಿ ಪುಟಿನ್‌ ವಿರೋಧಿ ಬರಹಗಳಿದ್ದ ಫಲಕ ಹಿಡಿದು ನಿಂತಿರುವ ಫೋಟೊವನ್ನು ಕೆಲ ಪ್ರಯಾಣಿಕರು ತೆಗೆದಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು ಎಂದೂ ಮೂಲಗಳು ತಿಳಿಸಿವೆ.

‘ರೈಲು ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ರಷ್ಯಾ ಪ್ರಜೆಯನ್ನು ಮಾತನಾಡಿಸಿದ್ದೆ ಮತ್ತು ಅವರ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪರಿಶೀಲಿಸಿದ್ದೇನೆ. ಎಲ್ಲಾ ದಾಖಲೆಗಳು ಸರಿ ಇದ್ದವು’ ಎಂದು ಭುವನೇಶ್ವರ ರೈಲು ನಿಲ್ದಾಣದ ರೈಲ್ವೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಜಯದೇವ್‌ ಬಿಸ್ವಜಿತ್‌ ಹೇಳಿದ್ದಾರೆ.

ಅವರಿಗೆ ಇಂಗ್ಲಿಷ್‌ ಮಾತನಾಡಲು ಬಾರದ ಕಾರಣ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾದ್ಯವಾಗಿಲ್ಲ ಎಂದೂ ವಿವರಿಸಿದ್ದಾರೆ.

ರಷ್ಯಾ ಪ್ರಜೆ ನಾಪತ್ತೆಯಾಗಿರುವ ಬಗ್ಗೆ ರೈಲ್ವೆ ಪೊಲೀಸರು ನಮಗೆ ಮಾಹಿತಿ ನೀಡಿದ್ದಾರೆ. ನಾವು ಅವರ ಪತ್ತೆಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪುರಿಯ ಪೊಲೀಸ್‌ ವರಿಷ್ಠಾಧಿಕಾರಿ ಕನ್ವರ್‌ ವಿಶಾಲ್‌ ಸಿಂಗ್‌ ಹೇಳಿದ್ದಾರೆ.

ಪಾವೆಲ್‌ ಆ್ಯಂಥವ್‌ ಹಾಗೂ ವಾಡ್ಲಿಮಿರ್‌ ಬಿದೆವೊ ಅವರ ಸಾವಿನ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.