ADVERTISEMENT

ಎಸ್ಯಾಟ್ ಬಳಕೆ ಯಾವಾಗ? ಹೇಗೆ? ಭಾರತದ ಉತ್ತರಕ್ಕೆ ಕುತೂಹಲದಿಂದ ಕಾಯುತ್ತಿದೆ ಜಗತ್ತು

ಎಸ್ಯಾಟ್ ಪ್ರಯೋಗದ ನಿಯಮಾವಳಿ ರೂಪಿಸಲು ಪ್ರಧಾನಿ ಆದೇಶ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 6:10 IST
Last Updated 29 ಮಾರ್ಚ್ 2019, 6:10 IST
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೋಭಾಲ್ (ಎಡಚಿತ್ರ). ಎಸ್ಯಾಟ್ ಕ್ಷಿಪಣಿ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೋಭಾಲ್ (ಎಡಚಿತ್ರ). ಎಸ್ಯಾಟ್ ಕ್ಷಿಪಣಿ   

ನವದೆಹಲಿ: ಶತ್ರುದೇಶದ ಗಡಿಯನ್ನೇ ಪ್ರವೇಶಿಸದೆ ಆ ದೇಶದ ಸಂವಹನ, ಮಿಲಿಟರಿ ಇಂಟಲಿಜೆನ್ಸ್, ಸಂಪರ್ಕ ಸಾಧನಗಳು, ಆರ್ಥಿಕತೆ, ಷೇರು ಮಾರುಕಟ್ಟೆ ಹವಾಮಾನ ಮುನ್ಸೂಚನೆ ಸೇರಿ ಬಹುತೇಕ ವ್ಯವಸ್ಥೆಗಳನ್ನು ಹಾಳುಗೆಡವಬಲ್ಲ ಸಾಮರ್ಥ್ಯ ಎಸ್ಯಾಟ್‌ (ಉಪಗ್ರಹ ನಾಶಕ) ಕ್ಷಿಪಣಿಗೆ ಇದೆ. ಸಂಪರ್ಕ ವ್ಯವಸ್ಥೆಗಳು ಉಪಗ್ರಹ ಆಧಾರಿತವಾಗಿರುವ ಕಾರಣ, ನಿರ್ದಿಷ್ಟ ಉಪಗ್ರಹವನ್ನುಹೊಡೆದುರುಳಿಸಿದರೆ ಶತ್ರುದೇಶದ ಇಡೀಸಂಪರ್ಕ ಜಾಲ ಅಸ್ತವ್ಯಸ್ತಗೊಳ್ಳುತ್ತದೆ.

ಎಸ್ಯಾಟ್ ಪ್ರಯೋಗಿಸಿ, ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಿದ ಸಂಗತಿಯನ್ನು ಭಾರತ ಬುಧವಾರ ಜಗತ್ತಿಗೆ ಸಾರಿ ಹೇಳಿದ ನಂತರ,ಈ ಕ್ಷಿಪಣಿಗಳನ್ನು ಭಾರತ ಮುಂದಿನ ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಿಗೆಹೇಗೆ ಬಳಸಲಿದೆ ಎಂಬ ಕುತೂಹಲ ವಿಶ್ವ ಸಮುದಾಯದಿಂದ ವ್ಯಕ್ತವಾಗಿತ್ತು.

‘ಮುಂದಿನ ದಿನಗಳಲ್ಲಿ ಯಾವುದೇ ದೇಶ ಭಾರತದಉಪಗ್ರಹಗಳನ್ನು ಹಾಳುಗೆಡವಲು ಯತ್ನಿಸಿದರೆ,ಉಪಗ್ರಹ ಉಡಾವಣೆಗೆ ತಡೆಯೊಡ್ಡಿದರೆ ಅಥವಾ ಎಲೆಕ್ಟ್ರೊ ಮ್ಯಾಗ್ನೆಟಿಕ್ ತರಂಗಗಳ ಮೂಲಕ ಅಂತರಿಕ್ಷದಲ್ಲಿರುವ ಉಪಗ್ರಹಗಳಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡಿದರೆ ಭಾರತ ಸರ್ಕಾರ ಹೇಗೆ ಪ್ರತಿಕ್ರಿಯಿಸಬೇಕು?’ ಈ ಪ್ರಶ್ನೆಗೆ ಉತ್ತರವಾಗಿ ಇದೀಗ ಎಸ್ಯಾಟ್ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಪ್ರಯತ್ನಗಳನ್ನು ಸರ್ಕಾರ ಆರಂಭಿಸಿದೆ.

ಭೂಮಿಯಿಂದ 600 ಕಿ.ಮೀ. ಎತ್ತರದಲ್ಲಿರುವ ಯಾವುದೇ ಉಪಗ್ರಹವನ್ನು ಹೊಡೆದುರುಳಿಸುವ ತಾಂತ್ರಿಕ ಮತ್ತು ಪ್ರಾಯೋಗಿಕ ಸಾಮರ್ಥ್ಯಭಾರತಕ್ಕೆ ಈಗ ಸಿದ್ಧಿಸಿದೆ. ಈ ಸಾಮರ್ಥ್ಯವನ್ನು ರಕ್ಷಣಾ ಕಾರ್ಯತಂತ್ರದ ಭಾಗವಾಗಿ ಹೇಗೆ ಬಳಸಿಕೊಳ್ಳಬೇಕು ಎನ್ನುವ ನೀತಿ ಈವರೆಗೆ ರೂಪುಗೊಂಡಿಲ್ಲ. ಅಣ್ವಸ್ತ್ರ ಶಕ್ತ ರಾಷ್ಟ್ರವಾಗಿದ್ದರೂ ಭಾರತ ‘ನಾನು ಮೊದಲು ಅಣ್ವಸ್ತ್ರ ಪ್ರಯೋಗಿಸುವುದಿಲ್ಲ’ ಎಂದು ಸ್ವಯಂ ನಿರ್ಬಂಧ ವಿಧಿಸಿಕೊಂಡಿದೆ. ಎಸ್ಯಾಟ್‌ ಕ್ಷಿಪಣಿ ಬಳಕೆ ನಿಯಮಗಳೂ ಇದೇ ಮಾದರಿಯಲ್ಲಿ ಇರಬಹುದು ಎನ್ನುವ ನಿರೀಕ್ಷೆಯನ್ನು ರಕ್ಷಣಾ ವಿದ್ಯಮಾನಗಳನ್ನು ಗಮನಿಸುತ್ತಿರುವ ಹಲವು ತಜ್ಞರು ವ್ಯಕ್ತಪಡಿಸಿದ್ದಾರೆ.

ದೇಶವನ್ನು ಖಂಡಾಂತರ ಕ್ಷಿಪಣಿಗಳಿಂದ ರಕ್ಷಿಸುವ ‘ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್‌ ಪ್ರೋಗ್ರಾಂ’ ಯೋಜನೆಗಾಗಿ ರೂಪುಗೊಂಡಿರುವ ತಂಡದ ನಾಯಕರಾಗಿರುವಅಜಿತ್ ಡೋಭಾಲ್ ಅವರಿಗೇ ಎಸ್ಯಾಟ್‌ ಬಳಕೆ ನಿಯಮಾವಳಿ ರೂಪಿಸುವ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿವಹಿಸಿದ್ದಾರೆ. ಖಂಡಾತರ ಕ್ಷಿಪಣಿಗಳಿಂದ ರಕ್ಷಿಸುವ ಯೋಜನೆಗಾಗಿ ರೂಪಿಸಿರುವ ತಂಡದಲ್ಲಿರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥರು ಸದಸ್ಯರಾಗಿದ್ದಾರೆ.

ಡಿಆರ್‌ಡಿಒ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಈ ಕುರಿತು ಶುಕ್ರವಾರ ವರದಿ ಪ್ರಕಟಿಸಿರುವ ‘ಹಿಂದೂಸ್ತಾನ್ ಟೈಮ್ಸ್’ ಜಾಲತಾಣ, ಅಣ್ವಸ್ತ್ರಗಳ ನಿರ್ವಹಣೆಗಾಗಿ ರೂಪಿಸಿರುವ‘ಅಣುಶಕ್ತಿ ನಿರ್ವಹಣಾ ಪ್ರಾಧಿಕಾರ’ದ ಮಾದರಿಯಲ್ಲಿಯೇ ಎಸ್ಯಾಟ್ ಕ್ಷಿಪಣಿಗಳ ನಿರ್ವಹಣೆಗೂ ಪ್ರಾಧಿಕಾರ ರಚಿಸಬೇಕಿದೆ. ಅದಕ್ಕೂ ಮೊದಲು ಎಸ್ಯಾಟ್ ಉಡಾವಣೆಗೆ ಅನುಸರಿಸಬೇಕಾದ ವಿಧಿವಿಧಾನಗಳು ಮತ್ತು ಶಿಷ್ಟಾಚಾರಗಳನ್ನು ರೂಪಿಸಬೇಕಿದೆ’ ಎಂದು ಹೇಳಿದೆ.

ಎಸ್ಯಾಟ್‌ ಕ್ಷಿಪಣಿಗಳ ನಿರ್ವಹಣೆ ಮತ್ತು ಬಳಕೆಯ ಮೇಲೆ ನಿಗಾ ಇರಿಸಲುಪ್ರತ್ಯೇಕ ಬಾಹ್ಯಾಕಾಶ ನಿಯಂತ್ರಣಾ ಕೇಂದ್ರ (ಸ್ಪೇಸ್ ಕಮಾಂಡ್) ಸ್ಥಾಪಿಸುವ ಕುರಿತೂ ರಕ್ಷಣಾ ಇಲಾಖೆಯ ಉನ್ನತ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಭಾರತದಲ್ಲಿ ಪ್ರಸ್ತುತ ಸೈಬರ್‌ ಕಮಾಂಡ್ ಮತ್ತು ವಿಶೇಷ ಕಾರ್ಯತಂತ್ರ ಕಮಾಂಡ್‌ಗಳು ಅಸ್ತಿತ್ವದಲ್ಲಿವೆ. ಇದರ ಜೊತೆಗೆ ಎಸ್ಯಾಟ್‌ ಬಳಕೆಗೆ ಸಂಬಂಧಿಸಿದ ಬಾಹ್ಯಾಕಾಶ ಕಮಾಂಡ್ ಸ್ಥಾಪಿಸುವ ಸಾಧ್ಯತೆಗಳು ದಟ್ಟವಾಗಿವೆ.

ಎಸ್ಯಾಟ್‌ ಕ್ಷಿಪಣಿಯನ್ನು ಅಂತರಿಕ್ಷದತ್ತ ಹಾರಿಬಿಡುವ ಮೊದಲೇ ಭಾರತೀಯ ಅಧಿಕಾರಿಗಳು ಅಮೆರಿಕದ ಕೊಲರಡೊ ನಗರದಲ್ಲಿರುವ ಅಮೆರಿಕ ಬಾಹ್ಯಾಕಾಶ ಕಮಾಂಡ್‌ನ ಕಾರ್ಯವಿಧಾನವನ್ನು ಅಭ್ಯಾಸ ಮಾಡಿದ್ದರು. ಅಮೆರಿಕ ರೂಪಿಸಿಕೊಂಡಿರುವಮಾರ್ಗದರ್ಶಿ ಸೂತ್ರಗಳನ್ನೂ ಸೂಕ್ಷ್ಮವಾಗಿ ಗಮನಿಸಿರುವ ಭಾರತೀಯ ಅಧಿಕಾರಿಗಳು ಪ್ರಸ್ತುತದ ಭಾರತದ ಅಗತ್ಯಕ್ಕೆ ತಕ್ಕಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಕಾರ್ಯ ಆರಂಭಿಸಿದ್ದಾರೆ.

ಎಸ್ಯಾಟ್ ಬಳಕೆಯ ಮೂಲಕ ಶತ್ರುದೇಶದ ಗಡಿಯನ್ನೇ ಪ್ರವೇಶಿಸದೆ ಆ ದೇಶದ ಆರ್ಥಿಕತೆ, ಷೇರು ವಹಿವಾಟು, ಮಿಲಿಟರಿ ಮತ್ತು ಹವಾಮಾನ ಮುನ್ಸೂಚನೆ ತಂತ್ರಜ್ಞಾನವನ್ನು ಹಾಳುಗೆಡವಬಹುದಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ರೂಪಿಸುತ್ತಿರುವ ಎಸ್ಯಾಟ್ ಬಳಕೆಯ ನಿಯಮಾವಳಿಗಳ ಬಗ್ಗೆ ಇಡೀ ವಿಶ್ವ ಕುತೂಹಲದಿಂದ ಕಾಯುತ್ತಿದೆ.

ಬಾಹ್ಯಾಕಾಶದಲ್ಲಿ ಚೀನಾ ದಾಳಿಯ ಆತಂಕ

ವಾಷಿಂಗ್ಟನ್: ‘ಬಾಹ್ಯಾಕಾಶ ರಕ್ಷಣೆ ವಿಷಯದಲ್ಲಿ ಭಾರತ ಇನ್ನೂ ದೀರ್ಘ ಹಾದಿ ಕ್ರಮಿಸಬೇಕಿದೆ’ ಎಂದು ಅಮೆರಿಕದ ಪ್ರಮುಖ ಬಾಹ್ಯಾಕಾಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಚೀನಾ 2007ರಲ್ಲಿ ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆ ನಡೆಸಿದ ನಂತರದಲ್ಲಿ ಭಾರತ ಸಹ ತನ್ನದೇ ಆದ ಕ್ಷಿಪಣಿ ನಿರ್ಮಾಣದಲ್ಲಿ ತೊಡಗಿತ್ತು. ಭವಿಷ್ಯದಲ್ಲಿ ಭಾರತದ ಬಾಹ್ಯಾಕಾಶದಲ್ಲಿ ಚೀನಾ ದಾಳಿನಡೆಸುವುದನ್ನು ಎದುರಿಸುವುದು ಇದರ ಗುರಿಯಾಗಿತ್ತು. ಈ ಪರೀಕ್ಷೆಯಿಂದ ಆ ಗುರಿ ಈಡೇರಿದೆ. ಆದರೆ ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಭಾರತಮತ್ತಷ್ಟು ಶ್ರಮಿಸಬೇಕಿದೆ’ ಎಂದು ಚಿಂತನ ಚಾವಡಿ ಕಾರ್ನಿಗಿ ಎಂಡೋಮೆಂಟ್‌ನಹಿರಿಯ ತಜ್ಞೆ ಆ್ಯಶ್ಲೆ ಜೆ ಟೆಲಿಸ್ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.