ADVERTISEMENT

ಎನ್‌ಡಿಎ ಪರೀಕ್ಷೆ: ಮಹಿಳೆಯರಿಗೆ ಅವಕಾಶ ನೀಡಿದ ಯುಪಿಎಸ್‌ಸಿ

ಅರ್ಜಿ ಸಲ್ಲಿಕೆಗೆ ಅ.8 ಕೊನೆ ದಿನ * ನ.14ಕ್ಕೆ ಪರೀಕ್ಷೆ

ಪಿಟಿಐ
Published 24 ಸೆಪ್ಟೆಂಬರ್ 2021, 10:16 IST
Last Updated 24 ಸೆಪ್ಟೆಂಬರ್ 2021, 10:16 IST
ಯುಪಿಎಸ್‌ಸಿ
ಯುಪಿಎಸ್‌ಸಿ   

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಹಾಗೂ ನೌಕಾ ಅಕಾಡೆಮಿ ಪ್ರವೇಶ ಪರೀಕ್ಷೆ ಬರೆಯಲು ಅವಿವಾಹಿತ ಮಹಿಳೆಯರಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶುಕ್ರವಾರ ಅನುಮತಿ ನೀಡಿದೆ.

ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು. upsconline.nic.in ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಹಾಗೂ ವಿವರಗಳು ಲಭ್ಯ ಇದ್ದು, ಅಕ್ಟೋಬರ್‌ 8ರ ಸಂಜೆ 6ರವರೆಗೆ ಅರ್ಜಿ ಸಲ್ಲಿಸಬಹುದು. ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ನೀಡಬೇಕಿಲ್ಲ. ನವೆಂಬರ್‌ 14ರಂದು ಪರೀಕ್ಷೆ ನಡೆಯಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಎನ್‌ಡಿಎಗೆ ಮಹಿಳೆಯರ ಪ್ರವೇಶದ ಅಧಿಸೂಚನೆಯನ್ನು 2022ರ ಮೇ ತಿಂಗಳಲ್ಲಿ ಹೊರಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಕೋರ್ಟ್‌ಗೆ ತಿಳಿಸಿತ್ತು. ಆದರೆ, ಇದನ್ನು ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ನೇತೃತ್ವದ ಪೀಠ ಒಪ್ಪಿಕೊಂಡಿರಲಿಲ್ಲ. ಮಹಿಳೆಯರ ಹಕ್ಕನ್ನು ಮೊಟಕು ಮಾಡುವುದು ಸಾಧ್ಯವಿಲ್ಲ ಎಂದಿದ್ದ ಪೀಠ, ಮಹಿಳೆಯರಿಗೂ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಸೂಚಿಸಿ ಮಧ್ಯಂತರ ಆದೇಶ ನೀಡಿತ್ತು.

ADVERTISEMENT

ಸುಪ್ರೀಂಕೋರ್ಟ್‌ ಆದೇಶದ ಬೆನ್ನಲ್ಲೇ, ಆಯೋಗ ಈಗ ಈ ಕ್ರಮ ಕೈಗೊಂಡಿದೆ. ಆದರೆ, ಈ ಸಂಬಂಧದ ಮೇಲ್ಮನವಿ ಕುರಿತು ಸುಪ್ರೀಂಕೋರ್ಟ್‌ ನೀಡುವ ತೀರ್ಪು ಹಾಗೂ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಒಳಪಟ್ಟು ಮಹಿಳೆಯರಿಗೆ ಈ ಪರೀಕ್ಷೆ ಬರೆಯಲು ತಾತ್ಕಾಲಿಕವಾಗಿ ಅವಕಾಶ ನೀಡಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.