ADVERTISEMENT

ರಾಜಸ್ಥಾನ: ಆಡಳಿತಾರೂಢ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಬಿಟಿಪಿ ಈಗ ಕಿಂಗ್‌ಮೇಕರ್

ಪಿಟಿಐ
Published 20 ಜುಲೈ 2020, 4:18 IST
Last Updated 20 ಜುಲೈ 2020, 4:18 IST
ರಾಜ್ಯಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದ ಬಿಟಿಪಿ ಪಕ್ಷದ ಶಾಸಕರು
ರಾಜ್ಯಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದ ಬಿಟಿಪಿ ಪಕ್ಷದ ಶಾಸಕರು   

ಜೈಪುರ: ರಾಜ್ಯ ವಿಧಾನಸಭೆಯಲ್ಲಿ ಸಣ್ಣ ಉಪಸ್ಥಿತಿಯಿದ್ದರೂ ಕೂಡ ರಾಜಸ್ಥಾನದಲ್ಲಿ ಈಗ ಯಾರು ಅಧಿಕಾರದಲ್ಲಿ ಉಳಿಯುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪಕ್ಷವು ಹೇಳಿಕೊಂಡಿದ್ದು, ತನ್ನನ್ನು ಕಿಂಗ್‌ ಮೇಕರ್‌ ಎಂದು ಕರೆದುಕೊಂಡಿದೆ.

‘200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ನಮ್ಮ ಪಕ್ಷದ ಇಬ್ಬರು ಶಾಸಕರಿದ್ದರೂ ಕೂಡ ನಾವೇ ಕಿಂಗ್‌ಮೇಕರ್ ಸ್ಥಾನದಲ್ಲಿದ್ದೇವೆ. ಸದನದಲ್ಲಿ ಇದು ಕಡಿಮೆ ಸಂಖ್ಯೆ ಎನಿಸಿದರೂ, ಬಿಟಿಪಿ ದೊಡ್ಡ ಶಕ್ತಿ ಹೊಂದಿದೆ’ ಎಂದು ಪಕ್ಷದ ಅಧ್ಯಕ್ಷ ಮಹೇಶ್‌ಭಾಯ್ ಸಿ. ವಾಸವ ಭಾನುವಾರ ಪಿಟಿಐ‌ಗೆ ತಿಳಿಸಿದ್ದಾರೆ.

ಬಿಟಿಪಿ ಶಾಸಕ ರಾಜ್‌ಕುಮಾರ್ ರೋಟ್ ಮತ್ತು ರಾಮ್ ಪ್ರಸಾದ್ ದಿಂಡೋರ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಇರುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿಯೇ ಇಬ್ಬರು ಶಾಸಕರು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ಆದರೆ ಈಗ ವಜಾಗೊಂಡಿರುವ ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್‌ನಿಂದಾಗಿ ಬಂಡಾಯ ಎದುರಿಸುತ್ತಿರುವ ಗೆಹ್ಲೋಟ್ ಅವರ ಪರವಾಗಿಯೇ ಪಕ್ಷವು ತಟಸ್ಥವಾಗಿ ಉಳಿಯುತ್ತದೆ ಎಂದು ಬಿಟಿಪಿ ಹೇಳಿದೆ.

ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ತನ್ನ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ ನಂತರ ಪಕ್ಷವು ಈಗ ಮುಖ್ಯಮಂತ್ರಿ ಗೆಹ್ಲೋಟ್‌ ಅವರಿಗೆ ಬೆಂಬಲ ನೀಡುತ್ತಿದೆ. 'ಬುಡಕಟ್ಟು ಜನರ ವಿಷಯದಲ್ಲಿ ನಾವು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಡಿದ್ದೇವೆ. ಆದರೆ ನಾವು ಎತ್ತಿದ್ದ ಸಮಸ್ಯೆಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಿದರೆ, ನಾವು ಅದನ್ನು ಏಕೆ ಬೆಂಬಲಿಸಬಾರದು? ಇದೆಲ್ಲದರ ನಂತರವೂ ಬುಡಕಟ್ಟು ಕಲ್ಯಾಣ ಮತ್ತು ಅಭಿವೃದ್ಧಿಯ ಕಾರ್ಯಸೂಚಿಯು ನೆರವೇರುತ್ತಿದೆ ವಾಸವ ತಿಳಿಸಿದ್ದಾರೆ.

ರಾಜಸ್ಥಾನ ಸರ್ಕಾರದಲ್ಲಿ ಕಳೆದ ವಾರ ಬಿಕ್ಕಟ್ಟು ಪ್ರಾರಂಭವಾದಾಗ, ವಾಸವಾ ಅವರು ರೋಟ್ ಮತ್ತು ದಿಂಡೋರ್ ಇಬ್ಬರಿಗೂ ಯಾವುದೇ ನಾಯಕ ಅಥವಾ ಪಕ್ಷವನ್ನು ಬೆಂಬಲಿಸಬಾರದೆಂದು ವಿಪ್ ಜಾರಿಮಾಡಿದ್ದರು.

ಆದರೆ, ಸಾಗ್ವಾರದ ಶಾಸಕ ರಾಮ್‌ ಪ್ರಸಾದ್ ದಿಂಡೋರ್ ಅವರು ವಿಪ್ ಅನ್ನು ಧಿಕ್ಕರಿಸಿ, ಇಬ್ಬರೂ ಶಾಸಕರು ರಾಜ್ಯ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದರು. ನಂತರ ಪಕ್ಷದ ಪದಾಧಿಕಾರಿಗಳು ಮತ್ತು ಶಾಸಕರು ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದರು.

'ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಗೆಹ್ಲೋಟ್ ಅವರು ನೀಡಿದ ಆಶ್ವಾಸನೆಯ ನಂತರ ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿಯೂ ನಾವು ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದೇವೆ. ಆದರೆ ಈವರೆಗೂ ಬೇಡಿಕೆಗಳು ಈಡೇರಿಲ್ಲ. ನಮ್ಮ ಬೇಡಿಕೆಗಳ ಪೈಕಿ ಕೆಲವನ್ನು ಒಂದೇ ದಿನದಲ್ಲಿ ಪೂರೈಸಬಹುದಿತ್ತು ಎಂದು ಚೋರಸಿಯ ಶಾಸಕ ರೋಟ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.