ADVERTISEMENT

ಕಾಶ್ಮೀರ: ಸನ್ನದ್ಧ ಸ್ಥಿತಿಯಲ್ಲಿ ವಾಯುಪಡೆ, ಆಹಾರ ಖರೀದಿಗೆ ಮುಗಿಬೀಳುತ್ತಿರುವ ಜನ

ಝುಲ್ಫೀಕರ್ ಮಜೀದ್
Published 7 ಆಗಸ್ಟ್ 2019, 5:25 IST
Last Updated 7 ಆಗಸ್ಟ್ 2019, 5:25 IST
ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಆರ್‌ಪಿಎಫ್ ಯೋಧ (ಪಿಟಿಐ ಚಿತ್ರ).
ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಆರ್‌ಪಿಎಫ್ ಯೋಧ (ಪಿಟಿಐ ಚಿತ್ರ).   

ಶ್ರೀನಗರ: ಕಾಶ್ಮೀರ ಕಣಿವೆಗೆ ಹೆಚ್ಚುವರಿಯಾಗಿ 28 ಸಾವಿರ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ರವಾನಿಸಿದ ನಂತರಕೇಂದ್ರ ಸರ್ಕಾರವು ಇದೀಗಭೂಸೇನೆ ಮತ್ತು ವಾಯುಪಡೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಆದೇಶಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಭದ್ರತಾ ಸಿಬ್ಬಂದಿ ಸಂಖ್ಯೆ ಜನರಲ್ಲಿ ಹಲವು ಊಹಾಪೋಹಗಳಿಗೆ ಮತ್ತು ಆತಂಕಕ್ಕೆ ಕಾರಣವಾಗಿದೆ.

‘ಕಾಶ್ಮೀರದಲ್ಲಿ ಸದ್ಯದಲ್ಲಿಯೇ ಏನೋ ಮಹತ್ತರವಾದುದು ನಡೆಯಲಿದೆ’ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಗಾಬರಿಯಿಂದ ಆಹಾರ ಮತ್ತು ದಿನಬಳಕೆ ವಸ್ತುಗಳನ್ನು ಖರೀದಿಸಲು ಅಂಗಡಿಗಳತ್ತ ಧಾವಿಸುತ್ತಿದ್ದಾರೆ.

ವಾಯುಸೇನೆಯ ಫೈಟರ್‌ ವಿಮಾನಗಳು ಗುರುವಾರ ಸಂಜೆಯಿಂದೀಚೆಗೆ ರಾಜ್ಯದ ವಿವಿಧೆಡೆ ಗಸ್ತು ಹಾರಾಟ ನಡೆಸುತ್ತಿವೆ. ಭದ್ರತಾ ಸಿಬ್ಬಂದಿ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುವ ಕಾರಣ ಸುರಕ್ಷೆಗಾಗಿ ವಾಯುಪಡೆ ವಿಮಾನಗಳಗಸ್ತು ಹಾರಾಟ ನಡೆಸಿವೆ ಎಂದು ಮೂಲಗಳು ಹೇಳಿವೆ.

ADVERTISEMENT

ಕೇಂದ್ರ ಗೃಹ ಇಲಾಖೆಯು ಹೆಚ್ಚುವರಿಯಾಗಿ 28 ಸಾವಿರ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಿರುವ ವರದಿಗಳನ್ನು ತಳ್ಳಿಹಾಕಿದೆ. ಆದರೆ ಮೂಲಗಳ ಪ್ರಕಾರ,ವಾಯುಪಡೆಯ ಸಿ–17 ವಿಮಾನಗಳುಪ್ಯಾರಾಮಿಲಿಟರಿ ಪಡೆಗಳ ಕ್ಷಿಪ್ರನಿಯೋಜನೆಗೆ ಬಳಕೆಯಾಗಿವೆ. ‘ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಿ’ ಎಂದು ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವ ರಾಷ್ಟ್ರೀಯ ರೈಫಲ್ಸ್‌ ಮತ್ತು ಇತರ ಸೇನಾ ತುಕಡಿಗಳಿಗೆ ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಕಾಶ್ಮೀರದ ರಾಜಧಾನಿ ಶ್ರೀನಗರದಎಲ್ಲ ಪ್ರಮುಖ ವೃತ್ತಗಳು, ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ನಗಣ್ಯ ಎನಿಸುವಷ್ಟು ಸ್ಥಳೀಯ ಪೊಲೀಸರು ಕಾಣಿಸುತ್ತಿದ್ದಾರೆ’ ಎಂದು ಪಿಟಿಐ ವರದಿ ಮಾಡಿದೆ.

ವಾಯುಪಡೆ ಮತ್ತು ಭೂಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿರುವುದನ್ನು ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿರುವಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ‘ಕಾಶ್ಮೀರದಲ್ಲಿ ಏನಾಗ್ತಿದೆ? ಭೂಸೇನೆ ಮತ್ತು ವಾಯುಪಡೆಯನ್ನು ಏಕೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಸಂವಿಧಾನದ 35ಎ ವಿಧಿ ಅಥವಾ ಕ್ಷೇತ್ರಗಳ ಪುನರ್‌ ವಿಂಗಡನೆ ಕೆಲಸ ಶೀಘ್ರ ಆರಂಭವಾಗಲಿದೆಯೇ? ಇಂಥ ಸನ್ನದ್ಧತೆ ಅಪರೂಪದ ವಿದ್ಯಮಾನ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.