ADVERTISEMENT

ಕೆಮ್ಮಿನ ಸಿರಪ್‌ನಿಂದ ಸಾವು ಪ್ರಕರಣ: ಔಷಧ ತಯಾರಿಕೆ ಬಂದ್ ಮಾಡಲು ಸೂಚನೆ

ಪಿಟಿಐ
Published 12 ಅಕ್ಟೋಬರ್ 2022, 13:48 IST
Last Updated 12 ಅಕ್ಟೋಬರ್ 2022, 13:48 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೆಮ್ಮಿನ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದಭಾರತೀಯ ಕಂಪನಿ ಮೈಡೇನ್‌ ಫಾರ್ಮಾಸ್ಯುಟಿಕಲ್ಸ್‌ ಘಟಕದಲ್ಲಿ ಔಷಧ ತಯಾರಿಕೆಯನ್ನು ಸ್ಥಗಿತಗೊಳಿಸುವಂತೆ ಹರಿಯಾಣ ಸರ್ಕಾರವು ಆದೇಶಿಸಿದ್ದು, ತಪಾಸಣೆ ವೇಳೆ ಕಂಡುಬಂದ ವಿರೋಧಾಭಾಸಗಳ ಕುರಿತು ವಾರದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.

ಒಂದು ವೇಳೆ ಔಷಧ ತಯಾರಿಕೆ ಸ್ಥಗಿತಗೊಳಿಸದಿದ್ದರೆ ಮತ್ತು ವಿವರಣೆ ನೀಡದಿದ್ದರೆ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದೂ ಸರ್ಕಾರ ಎಚ್ಚರಿಕೆ ನೀಡಿದೆ.

ರಾಜ್ಯ ಮತ್ತು ಕೇಂದ್ರದ ಜಂಟಿ ತಂಡವು ಔಷಧ ತಯಾರಿಕಾ ಘಟಕವನ್ನು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ 12 ನ್ಯೂನತೆಗಳನ್ನು ಪತ್ತೆ ಮಾಡಿದೆ ಎಂದು ಅನಿಲ್ ವಿಜ್ ಹೇಳಿದ್ದಾರೆ. ಇದನ್ನು ಮನಗಂಡ ರಾಜ್ಯ ಸರ್ಕಾರ ಈ ಘಟಕದಲ್ಲಿ ಔಷಧ ಉತ್ಪಾದನೆ ಸ್ಥಗಿತಗೊಳಿಸಲು ಆದೇಶಿಸಿದೆ.

ADVERTISEMENT

‘ಎಲ್ಲಾ ಔಷಧ ಉತ್ಪಾದನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ನಾವು ಆದೇಶಿಸಿದ್ದೇವೆ’ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಬುಧವಾರ ತಿಳಿಸಿದ್ದಾರೆ.

ಆಫ್ರಿಕನ್ ರಾಷ್ಟ್ರ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಭಾರತೀಯ ಔಷಧ ಕಂಪನಿಯ ನಾಲ್ಕು ಕೆಮ್ಮು ಸಿರಪ್‌ಗಳು ಕಾರಣವೆಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಮಾಹಿತಿ ನೀಡಿದ ಬಳಿಕ ಔಷಧಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಹರಿಯಾಣ ಸರ್ಕಾರವು ಆದೇಶ ನೀಡಿದೆ.

ಡಬ್ಲ್ಯುಎಚ್‌ಒ ಎಚ್ಚರಿಕೆಯ ನಂತರ ನಾಲ್ಕು ಕೆಮ್ಮು ಸಿರಪ್‌ಗಳ ಮಾದರಿಗಳನ್ನು ಪರೀಕ್ಷೆಗಾಗಿ ಅಕ್ಟೋಬರ್ 6ರಂದು ಕೊಲ್ಕತ್ತದ ಕೇಂದ್ರ ಔಷಧೀಯ ಪ್ರಯೋಗಾಲಯಕ್ಕೆಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರ ವರದಿ ಇನ್ನಷ್ಟೇ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.