ನವದೆಹಲಿ: ಸಂಸತ್ ಭವನ ದಾಳಿಯ ರೂವಾರಿ ಅಫ್ಜಲ್ ಗುರು ಹೊಗಳಿದ್ದ ತಮಿಳುನಾಡಿನ ತೌಹೀದ್ ಜಮಾದ್‌ನ ಇಬ್ಬರು ಸದಸ್ಯರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
2022ರ ಮಾರ್ಚ್ 17ರಂದು ರಹಮತ್ತುಲ್ಲಾ ಮತ್ತ ಜಮಾಲ್ ಮೊಹಮ್ಮದ್ ಎಂಬುವವರು ಅತ್ಯಂತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಡುಪು ಕುರಿತು ಹೇಳಿಕೆ ಮತ್ತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಅಸಾಂವಿಧಾನಿಕ ಪದ ಬಳಸಿದ ಆರೋಪವೂ ಈ ಇಬ್ಬರ ಮೇಲಿದೆ. ಇವರ ಹೇಳಿಕೆ ಕುರಿತು ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಈ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
‘ಸಂಸತ್ ಭವನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಹೊಗಳಿಕೆ, ಅಯೋಧ್ಯೆ ರಾಮಮಂದಿರ ಕುರಿತ ತೀರ್ಪು ವಿರುದ್ಧ ಹೇಳಿಕೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉಡುಪಿನ ಕುರಿತು ವ್ಯಂಗ್ಯ, ಕ್ರೈಸ್ತರ ಹಬ್ಬಗಳ ಕುರಿತು ಟೀಕೆ, ಹಿಂದೂ ಆಚರಣೆಗಳ ಕುರಿತು ಅವಹೇಳನ, ಖಡ್ಗ ಹೊಂದುವ ಸಿಖ್ಖರ ಧಾರ್ಮಿಕ ಪದ್ಧತಿ ಕುರಿತು ಹೇಳಿಕೆ ಮತ್ತು ಇದನ್ನು ಮುಸ್ಲಿಮ್ ಮಹಿಳೆಯರ ಹಿಜಬ್‌ಗೆ ಹೋಲಿಕೆ ಮಾಡಿದ ಆರೋಪ ಹಾಗೂ ಹಿಜಬ್ ಕುರಿತ ಕರ್ನಾಟಕ ಹೈಕೋರ್ಟ್‌ನ ತೀರ್ಪಿಗೆ ಟೀಕೆ ಮಾಡಿದ ಆರೋಪಗಳು ಇವರ ಮೇಲಿವೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತಲ್ಲಕುಲಂ, ತಂಜಾವೂರ್, ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆದರೆ ಒಂದೇ ಪ್ರಕರಣ ಕುರಿತು ಹಲವು ಎಫ್‌ಐಆರ್‌ಗಳು ದಾಖಲಾಗುವಂತಿಲ್ಲ, ಸಂವಿಧಾನ ಪ್ರಕಾರ ವ್ಯಕ್ತಿಗೆ ಸಹಜವಾಗಿ ಲಭ್ಯವಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಈ ಇಬ್ಬರು ಆರೋಪಿಗಳು ವಾದಿಸಿದ್ದರು.
‘ಇವರ ಈ ದ್ವೇಷ ಭಾಷಣವು ಮದುರೈ ಮತ್ತು ಬೆಂಗಳೂರಿನ ಜನರ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ತಮಿಳುನಾಡು ಮತ್ತು ಕರ್ನಾಟಕ ಪರ ವಕೀಲರು ವಾದ ಮಂಡಿಸಿದರು.
ಇದನ್ನು ಪುರಸ್ಕರಿಸಿದ ನ್ಯಾಯಾಲಯ, ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.