
ನವದೆಹಲಿ: ನಿವೃತ್ತರಾಗುವ ‘ಅಗ್ನಿವೀರ’ರನ್ನು ದೇಶದ 10 ಪ್ರಮುಖ ಖಾಸಗಿ ಭದ್ರತಾ ಸಂಸ್ಥೆಗಳಲ್ಲಿ ನಿಯೋಜಿಸಬಹುದು ಎಂದು ಮಂಗಳವಾರ ಗೃಹಸಚಿವಾಲಯ ಹೊರಡಿಸಿರುವ ಅಧಿಸೂಚನೆ ಕುರಿತು ಕಾಂಗ್ರೆಸ್ ಪಕ್ಷ ಕೇಂದ್ರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
‘ಕೇಂದ್ರದ ನರೇಂದ್ರ ಮೋದಿ ಸರ್ಕಾರವೇ ಅಗ್ನಿವೀರರು ನಿವೃತ್ತಿಯಾದ ನಂತರ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿರುವಾಗ, ಗೃಹ ಸಚಿವಾಲಯವು, ಖಾಸಗಿ ಭದ್ರತಾ ಸಂಸ್ಥೆಗಳಿಗೆ ಸೇರಿಸಿಕೊಳ್ಳಹುದೆಂದು ಏಕೆ ಅಧಿಸೂಚನೆ ಹೊರಡಿಸಿದೆ‘ ಎಂದು ಕಾಂಗ್ರೆಸ್ ಪಕ್ಷದ ನಿವೃತ್ತ ಸೇನಾ ಯೋಧರ ವಿಭಾಗದ ಅಧ್ಯಕ್ಷ ನಿವೃತ್ತ ಕರ್ನಲ್ ರೋಹಿತ್ ಚೌಧರಿ ಪ್ರಶ್ನಿಸಿದ್ದಾರೆ.
‘ನಿವೃತ್ತ ಅಗ್ನಿವೀರರಿಗೆ ಪಿಂಚಣಿ ನೀಡುವ ಉದ್ಯೋಗಗಳನ್ನು ಯಾವಾಗ ಮತ್ತು ಎಲ್ಲಿ ಕೊಡಿಸುತ್ತೀರಿ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಆಪರೇಷನ್ ಸಿಂಧೂರ್ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸೈನಿಕರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಪರವಾಗಿಲ್ಲ, ಆದರೆ, ಹೀಗೆ ಅವರನ್ನು ವಂಚಿಸಬಾರದಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅಗ್ನಿವೀರರನ್ನು ಖಾಸಗಿ ಸೈನಿಕರನ್ನಾಗಿಸಲು ಹಾಗೂ ದೇಶ–ವಿದೇಶಗಳಲ್ಲಿ ಯುದ್ಧಗಳಿಗೆ ನಿಯೋಜಿಸಲು ನಾವು ಬಿಡುವುದಿಲ್ಲ. ನಮ್ಮ ಜೈ ಜವಾನ್ ಅಭಿಯಾನ ಮುಂದುವರಿಯುತ್ತದೆ. ಸೈನಿಕರ ಹಿತದೃಷ್ಟಿಯಿಂದ ನಾವು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತವೆ’ ಎಂದು ಚೌಧರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.