ADVERTISEMENT

ರೈತರ ಪ್ರತಿಭಟನೆ ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತ: ತೋಮರ್

ಏಜೆನ್ಸೀಸ್
Published 5 ಫೆಬ್ರುವರಿ 2021, 7:59 IST
Last Updated 5 ಫೆಬ್ರುವರಿ 2021, 7:59 IST
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್   

ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯು ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು, ರೈತರನ್ನು ಪ್ರಚೋದಿಸಲಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಸಿದ್ಧ ಎಂದು ಹೇಳಿದೆ. ಇದರರ್ಥ ಕೃಷಿ ಕಾಯ್ದೆಗಳಲ್ಲಿ ಸಮಸ್ಯೆಯಿದೆ ಎಂಬುದಲ್ಲ. ನಿರ್ದಿಷ್ಟ ರಾಜ್ಯದ ರೈತರಿಗೆ ತಪ್ಪಾದ ಮಾಹಿತಿ ನೀಡಲಾಗಿದೆ ಎಂದು ತೋಮರ್ ಆರೋಪಿಸಿದರು.

ಈ ಕಾಯ್ದೆಗಳನ್ನು ಜಾರಿಗೆ ತಂದರೆ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಾರೆ ಎಂದು ತಪ್ಪಾದ ಮಾಹಿತಿ ನೀಡಲಾಗಿದೆ. ರೈತರ ಭೂಮಿಯನ್ನು ಕಸಿದುಕೊಳ್ಳುವ ಒಂದೇ ಒಂದು ನಿಬಂಧನೆ ಕೃಷಿ ಕಾಯ್ದೆಯಲ್ಲಿದೆಯೇ ? ಹಾಗಿದ್ದರೆ ನನಗೆ ತಿಳಿಸಿ ಎಂದು ಸವಾಲು ಹಾಕಿದರು.

ADVERTISEMENT

ರೈತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ಹಣ್ಣುಗಳು ಹಾಗೂ ತರಕಾರಿಗಳನ್ನು ರೈಲ್ವೇ ಮೂಲಕ ಸಾಗಿಸಬಹುದು ಎಂದು ಯಾರಾದರೂ ಭಾವಿಸಿದ್ದಾರೆಯೇ? 100 ಕಿಸಾನ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಇದು ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ರೈತರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬದ್ಧವಾಗಿದ್ದಾರೆ. ನಮ್ಮ ಪ್ರಯತ್ನಗಳು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ ಮತ್ತು ಜಿಡಿಪಿಗೆ ಕೃಷಿಯ ಕೊಡುಗೆ ವೇಗವಾಗಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ಕಾಯ್ದೆಗಳು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂಬುದನ್ನು ರೈತರಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ನಾವು ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 50ಕ್ಕಿಂತಲೂ ಹೆಚ್ಚು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಲು ಪ್ರಾರಂಭಿಸಿದ್ದೇವೆ. ಅಷ್ಟೇ ಅಲ್ಲದೆ ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ 1 ಲಕ್ಷ ಕೋಟಿ ರೂ. ಕೃಷಿ ಮೂಲಸೌಕರ್ಯ ನಿಧಿ ನೀಡಿದ್ದೇವೆ. ಈ ಹೂಡಿಕೆಯನ್ನು ಕೃಷಿ ಕ್ಷೇತ್ರಕ್ಕೆ ತಲುಪಿಸುವುದನ್ನು ಖಚಿತಪಡಿಸಿದ್ದೇವೆ ಎಂದು ವಿವರಿಸಿದರು.

ಬಡವರ ಪರವಾದ ಸರ್ಕಾರದ ಯೋಜನೆಗಳು ಗ್ರಾಮಗಳಲ್ಲಿ ವಾಸಿಸುವ ಜನರ ಜೀವನದಲ್ಲಿ ಬದಲಾವಣೆಯನ್ನು ತಂದಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.