ADVERTISEMENT

ಚಾರ್‌ಧಾಮ್ ಯಾತ್ರೆ: ಜೋಶಿಮಠ–ಬದರೀನಾಥ ಮಾರ್ಗದ ನಡುವೆ ಬಿರುಕು

ಪಿಟಿಐ
Published 20 ಫೆಬ್ರುವರಿ 2023, 15:35 IST
Last Updated 20 ಫೆಬ್ರುವರಿ 2023, 15:35 IST
ಕೇದಾರನಾಥ ದೇವಾಲಯ
ಕೇದಾರನಾಥ ದೇವಾಲಯ   

ಗೋಪೇಶ್ವರ (ಉತ್ತರಾಖಂಡ): ಚಾರ್‌ಧಾಮ್‌ ಯಾತ್ರೆಗೆ ಸಿದ್ಧತೆ ನಡೆಯುತ್ತಿದ್ದು, ಇಲ್ಲಿನ ನರಸಿಂಗ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಜೋಶಿಮಠ ಮತ್ತು ಬದರೀನಾಥ ನಡುವಿನ ರಸ್ತೆಯಲ್ಲಿ ಹೊಸದಾಗಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ಸೋಮವಾರ ಮಾಹಿತಿ ನೀಡಿದ್ದಾರೆ.

ಬದರೀನಾಥ ಹೆದ್ದಾರಿಯ ಈ ಉಪರಸ್ತೆಯನ್ನು ಯಾತ್ರೆಯ ಸಮಯದಲ್ಲಿ ಜೋಶಿಮಠದಿಂದ ಬದರೀನಾಥಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಬಳಸಲಾಗುತ್ತದೆ.

‘ಮೂರು ದಿನಗಳ ಹಿಂದೆ ಈ ಮಾರ್ಗದ ರಸ್ತೆಯಲ್ಲಿ ಹೊಸದಾಗಿ ಬಿರುಕುಗಳು ಕಾಣಿಸಿಕೊಂಡಿವೆ’ ಎಂದು ಜೋಶಿಮಠ ಬಚಾವೋ ಸಂಘರ್ಷ ಸಮಿತಿ (ಜೆಬಿಎಸ್‌ಎಸ್‌) ವಕ್ತಾರ ಕಮಲ್ ರಾತುರಿ ತಿಳಿಸಿದ್ದಾರೆ.

ADVERTISEMENT

ಈ ರಸ್ತೆಯನ್ನು ಉತ್ತರಾಖಂಡ ಸರ್ಕಾರದ ಲೋಕೋಪಯೋಗಿ ಇಲಾಖೆಯು ನಿರ್ವಹಿಸುತ್ತಿದೆ. ಬದರೀನಾಥದಿಂದ ಹಿಂತಿರುಗುವ ಜೋಶಿಮಠ ಮತ್ತು ಮಾರ್ವಾಡಿ ನಡುವಿನ ಹೆದ್ದಾರಿಯಲ್ಲೂ ಕೆಲವು ಬಿರುಕುಗಳು ಕಾಣಿಸಿಕೊಂಡಿವೆ. ಈ ಮಾರ್ಗವು ಜೋಶಿಮಠದ ಮುಖ್ಯಮಾರುಕಟ್ಟೆಯ ಮೂಲಕ ಹಾದುಹೋಗುತ್ತದೆ.

‘ಗಡಿಭಾಗದ ರಸ್ತೆಗಳನ್ನು ನಿರ್ವಹಿಸುವ ಬಾರ್ಡರ್ ರೋಡ್ಸ್ ಸಂಘಟನೆಯು (ಬಿಆರ್‌ಒ) ಈ ಹೆದ್ದಾರಿಯನ್ನು ದುರಸ್ತಿ ಮಾಡುತ್ತಿದೆ. ಬದರೀನಾಥಕ್ಕೆ ತೆರಳುವ ಯಾತ್ರಾರ್ಥಿಗಳ ಸುರಕ್ಷಿತ ಪ್ರಯಾಣಕ್ಕಾಗಿ ಜೋಶಿಮಠದ ಪ್ರವೇಶ ಸ್ಥಳದಿಂದ ಔಲಿಗೆ ಸಾಗುವ ಮಾರ್ಗದ ಗ್ಯಾಸ್ ಗೋಡೌನ್‌ವರೆಗಿನ ರಸ್ತೆಯನ್ನು ಶೀಘ್ರವಾಗಿ ಸರಿಪಡಿಸಬೇಕು’ ಎಂದು ಕಮಲ್ ರಾತುರಿ ಒತ್ತಾಯಿಸಿದ್ದಾರೆ.

ಏಪ್ರಿಲ್ 27ರಂದು ಬದರೀನಾಥ ಯಾತ್ರೆಯು ಪ್ರಾರಂಭವಾಗಲಿದೆ. ಚಳಿಗಾಲದ ವಿರಾಮದ ನಂತರ ಚಾರ್‌ಧಾಮ್ ಸರ್ಕ್ಯೂಟ್‌ನಲ್ಲಿರುವ ಹಿಮಾಲಯ ಶ್ರೇಣಿಯ ನಾಲ್ಕು ದೇವಾಲಯಗಳನ್ನು ತೆರೆಯುವುದಾಗಿ ಉತ್ತರಾಖಂಡ ಸರ್ಕಾರವು ಈಗಾಗಲೇ ಘೋಷಿಸಿದೆ. ಕೇದಾರನಾಥ ಪೋರ್ಟಲ್ ಏಪ್ರಿಲ್ 25ರಂದು, ಗಂಗೋತ್ರಿ ಹಾಗೂ ಯಮುನೋತ್ರಿ ಪೋರ್ಟಲ್‌ಗಳು ಏಪ್ರಿಲ್ 22ರಂದು ತೆರೆಯಲಿವೆ. ಈ ಯಾತ್ರೆಗೆ ಫೆ. 21ರಿಂದಲೇ ಆನ್‌ಲೈನ್ ನೋಂದಣಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.