ADVERTISEMENT

ಜ್ಞಾನವಾಪಿ: ಐತಿಹಾಸಿಕ ತಪ್ಪು ಸರಿಪಡಿಸಲು ಮುಸ್ಲಿಮರಿಗೆ ಯೋಗಿ ಸಲಹೆ

ಪಿಟಿಐ
Published 31 ಜುಲೈ 2023, 16:30 IST
Last Updated 31 ಜುಲೈ 2023, 16:30 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ: ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಆಗಿರುವ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸುವಂತೆ ಮುಸ್ಲಿಂ ಸಮುದಾಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಲಹೆ ನೀಡಿದ್ದಾರೆ.

ಖಾಸಗಿ ಟಿ.ವಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯೋಗಿ, ಮುಸ್ಲಿಂ ಧರ್ಮಗುರುಗಳು ಮತ್ತು ಮುಖಂಡರು ವಿರೋಧಿಸುತ್ತಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪ್ರಸ್ತಾವ ಉಲ್ಲೇಖಿಸಿದ ಅವರು, ದೇಶವು ಸಂವಿಧಾನದ ಮೂಲಕ ಆಡಳಿತ ನಡೆಸುತ್ತದೆ, ಯಾವುದೇ ಧರ್ಮದಿಂದ ಅಲ್ಲ ಎಂದಿದ್ದಾರೆ.

‘ನಾನು ಜ್ಞಾನವಾಪಿಯನ್ನು ಮಸೀದಿ ಎಂದು ಕರೆದರೆ ವಿವಾದ ಉಂಟಾಗುತ್ತದೆ. ಮಸೀದಿಯೊಳಗೆ ತ್ರಿಶೂಲ ಏನು ಮಾಡುತ್ತಿದೆ?. ನಾವು ಅದನ್ನು ಅಲ್ಲಿ ಇಟ್ಟಿಲ್ಲ,  ಅಲ್ಲಿ ಜ್ಯೋತಿರ್ಲಿಂಗವಿದೆ, ಅನೇಕ ವಿಗ್ರಹಗಳಿವೆ’ ಎಂದು ಸಿ.ಎಂ ಹೇಳಿದರು.

ADVERTISEMENT

ಜ್ಞಾನವಾಪಿ ಮಸೀದಿ‌ ಮೇಲಿನ ತಮ್ಮ ಹಕ್ಕನ್ನು ಮುಸ್ಲಿಮರು ಕೈಬಿಡಬೇಕು ಎಂದು ಸಲಹೆ ನೀಡಿದ ಯೋಗಿ , ಐತಿಹಾಸಿಕ ತಪ್ಪು ನಡೆದಿದೆ ಮತ್ತು ಅದನ್ನು ಸರಿಪಡಿಸುವಂತೆ ಮುಸ್ಲಿಂ ಸಮುದಾಯ ಪ್ರಸ್ತಾವ ಸಲ್ಲಿಸಬೇಕು ಎಂದು ಹೇಳಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೇವರ ಶಿಷ್ಯ. ಬೂಟಾಟಿಕೆ ನಂಬುವುದಿಲ್ಲ. ನಿಮ್ಮ ಧರ್ಮ ನಿಮ್ಮ ಮನೆಯೊಳಗೆ ಇದೆ. ಬೀದಿಗಳಲ್ಲಿ ಪ್ರದರ್ಶನ ನೀಡಲು ಅಲ್ಲ. ಇತರರ ಮೇಲೆ ಹೇರಲು ಅಲ್ಲ ಎಂದರು.

ಜ್ಞಾನವಾಪಿ ಮಸೀದಿ ಆವರಣದ ವಿಸ್ತೃತ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್‌ ಹೈಕೋರ್ಟ್ ಆ.3ರಂದು ನೀಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.