ADVERTISEMENT

ಪಂಚರಾಜ್ಯ ಚುನಾವಣಾ ಕಣ: ಜ್ಯುಬಿಲಿ ಹಿಲ್ಸ್‌ನಿಂದ ಅಜರ್ ಸ್ಪರ್ಧೆ

ಪಿಟಿಐ
Published 28 ಅಕ್ಟೋಬರ್ 2023, 18:48 IST
Last Updated 28 ಅಕ್ಟೋಬರ್ 2023, 18:48 IST
   

₹200 ಕೋಟಿ ಮೌಲ್ಯದ ವಸ್ತು ವಶ

ಜೈಪುರ: ರಾಜಸ್ಥಾನದಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಸಂಗ್ರಹಿಸಿದ್ದ ನಗದು ಸೇರಿದಂತೆ ₹ 200 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಚಾರದ ವೇಳೆ ಮತದಾರರು ಅಭ್ಯರ್ಥಿಗಳಿಂದ ಪ್ರಭಾವಿತರಾಗದಂತೆ ನಿಗಾವಹಿಸುವ ಸಲುವಾಗಿ ಐಜಿಪಿ ವಿಕಾಸ್ ಕುಮಾರ್ ಅವರು 12 ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ. 

₹25 ಕೋಟಿ ನಗದು, ₹20 ಕೋಟಿ ಮೌಲ್ಯದ ಮದ್ಯ, ₹20 ಕೋಟಿ ಮೌಲ್ಯದ ಆಭರಣ ಮತ್ತು ಚಿನ್ನ ಸೇರಿದಂತೆ ₹214 ಕೋಟಿ  ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಪಿಎಸ್ ಅಧಿಕಾರಿ ಕುಮಾರ್ ಹೇಳಿದ್ದಾರೆ.

ADVERTISEMENT

ಇದಲ್ಲದೆ, ವಿವಿಧ ಜಿಲ್ಲೆಗಳಲ್ಲಿ ₹60 ಕೋಟಿ ಮೌಲ್ಯದ ಮಾದಕವಸ್ತು, ಪೆಟ್ರೋಲ್, ಡೀಸೆಲ್ ಮತ್ತು ಮತದಾರರ ಮೇಲೆ ಪ್ರಭಾವ ಬೀರಲು ಅಕ್ರಮವಾಗಿ ಸಂಗ್ರಹಿಸಿದ ರಸಗೊಬ್ಬರವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜ್ಯುಬಿಲಿ ಹಿಲ್ಸ್‌ನಿಂದ ಅಜರ್ ಸ್ಪರ್ಧೆ

ನವದೆಹಲಿ: ತೆಲಂಗಾಣ ವಿಧಾನಸಭೆಗೆ 45 ಅಭ್ಯರ್ಥಿಗಳ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಾಜಿ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ಅವರನ್ನು ಜ್ಯುಬಿಲಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. 

110 ಸ್ಥಾನಗಳ ಪೈಕಿ 100ಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. 2009ರಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ಲೋಕಸಭಾ ಕ್ಷೇತ್ರದಿಂದ ಅಜರುದ್ದೀನ್ ಆಯ್ಕೆಯಾಗಿದ್ದರು. 

ಮಾಜಿ ಸಂಸದ ಮಧುಗೌಡ ಯಕ್ಷಿ ಅವರನ್ನು ಲಾಲ್‌ಬಹದ್ದೂರ್ ನಗರ ಕ್ಷೇತ್ರ, ಪೊನ್ನಮ್‌ ಪ್ರಭಾಕರ್ ಅವರನ್ನು ಹುಸಾನ್‌ಬಾದ್, ಕಂಡಿ ಶ್ರೀನಿವಾಸ್ ರೆಡ್ಡಿ ಅವರನ್ನು ಅದಿಲ್‌ಬಾದ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. 

ಕಮಲ್ ನಾಥ್-ದಿಗ್ವಿಜಯ್ ಜೋಡಿ ಅಮಿತಾಭ್-ಧರ್ಮೇಂದ್ರಗೆ ಹೋಲಿಕೆ

ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲ್ ನಾಥ್ ಮತ್ತು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ‘ಶೋಲೆ’ ಚಿತ್ರದಲ್ಲಿ ಕ್ರಮವಾಗಿ ‘ಜೈ’ ಮತ್ತು ‘ವೀರು’ ಪಾತ್ರ ನಿರ್ವಹಿಸಿದ ಅಮಿತಾಭ್‌ ಬಚ್ಚನ್ ಮತ್ತು ಧರ್ಮೇಂದ್ರ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಹೋಲಿಸಿದ್ದಾರೆ. 

ಪ್ರತಿಸ್ಪರ್ಧಿ ಬಿಜೆಪಿ ಈ ಇಬ್ಬರನ್ನು ಜೈಲಿನಿಂದ ತಪ್ಪಿಸಿಕೊಂಡವರು ಮತ್ತು ಮೋಸಗಾರರು ಎಂದಿದೆ. 

ಟಿಕೆಟ್ ಹಂಚಿಕೆಯಲ್ಲಿ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುರ್ಜೆವಾಲಾ, ‘ಧರ್ಮೇಂದ್ರ ಮತ್ತು ಅಮಿತಾಭ್ ಬಚ್ಚನ್ (ಶೋಲೆ ಚಿತ್ರ) ನಡುವಿನ ಸಂಬಂಧ ಸಿಂಗ್ ಮತ್ತು ನಾಥ್ ನಡುವಿನ ಸಂಬಂಧದಂತೆಯೇ ಇದೆ. ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿಯೊಳಗೆ ಭಾರಿ ಸಂಘರ್ಷ ನಡೆಯುತ್ತಿದೆ. ಟಿಕೆಟ್ ಬದಲಾವಣೆ ಎಲ್ಲಿ ಬೇಕು ಎಂಬ ಬಗ್ಗೆ ತಮ್ಮ ಪಕ್ಷ ನಿರ್ಧಾರ ತೆಗೆದುಕೊಂಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.