ADVERTISEMENT

Plane Crash: ವಿಮಾನ ಸಿಬ್ಬಂದಿ ಲಾಮ್‌ನುಂಥೆಮ್ ಮೃತದೇಹ ಸ್ವೀಕರಿಸಿದ ಕುಟುಂಬಸ್ಥರು

ಪಿಟಿಐ
Published 19 ಜೂನ್ 2025, 11:32 IST
Last Updated 19 ಜೂನ್ 2025, 11:32 IST
   

ಇಂಫಾಲ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಲಾಮ್‌ನುಂಥೆಮ್ ಸಿಂಗ್ಸೋನ್‌ ಅವರ ಪಾರ್ಥಿವ ಶರೀರವನ್ನು ದಿಮಾಪುರ ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರು ಸ್ವೀಕರಿಸಿದರು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

26 ವರ್ಷದ ಸಿಂಗ್ಸೋನ್‌ ಅವರು ಮಣಿಪುರದ ಕಂಗ್ಪೋಕ್ಪಿ ಜಿಲ್ಲೆಯವರು. ಇವರು ಕುಕಿ ಸಮುದಾಯಕ್ಕೆ ಸೇರಿದವರು.

ಮೃತದೇಹವನ್ನು ಇಂಡಿಗೊ ವಿಮಾನದಲ್ಲಿ ಅಹಮದಾಬಾದ್‌ನಿಂದ ನಾಗಾಲ್ಯಾಂಡ್‌ನ ದಿಮಾಪುರ ವಿಮಾನ ನಿಲ್ದಾಣಕ್ಕೆ ತರಲಾಯಿತು. ಕುಕಿ ವಿದ್ಯಾರ್ಥಿ ಸಂಘಟನೆ ಸದರ್ ಹಿಲ್ಸ್‌ನ ಪ್ರತಿನಿಧಿಗಳು ಸಹ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾತ್ರಿಯ ವೇಳೆಗೆ ಮೃತದೇಹ ಕಾಂಗ್ಪೋಕ್ಪಿಗೆ ತಲುಪುವ ನಿರೀಕ್ಷೆಯಿದೆ ಎಂದು ಸಿಂಗ್ಸೋನ್‌ ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು.

ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 242 ಮಂದಿಯನ್ನು ಹೊತ್ತ ವಿಮಾನವು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಇಲ್ಲಿನ ಬಿ.ಜೆ. ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದೆ. ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಸಿಂಗ್ಸೋನ್‌ ಕೂಡ ಒಬ್ಬರು.

ಸಿಂಗ್ಸೋನ್‌ ಅವರು ಮೂಲತಃ ಇಂಫಾಲದ ಓಲ್ಡ್ ಲಂಬುಲೇನ್ ಕಾಲೋನಿಯವರು. ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಕುಟುಂಬ ಇಂಫಾಲದಿಂದ ಕಂಗ್ಪೋಕ್ಪಿ ಜಿಲ್ಲೆಗೆ ಸ್ಥಳಾಂತರಗೊಂಡಿತ್ತು. ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದೆ.

ತಂದೆಯನ್ನು ಕಳೆದುಕೊಂಡಿರುವ ಸಿಂಗ್ಸೋನ್‌, ತಾಯಿ ಮತ್ತು ಮೂವರು ಸಹೋದರರ ಜವಾಬ್ದಾರಿಯನ್ನು ಹೊತ್ತಿದ್ದರು. ಹಿರಿಯ ಸಹೋದರ ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಉಳಿದ ಇಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.