ರಂಜಿತಾ ನಾಯರ್
ಕಾಸರಗೋಡು: ಅಹಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದ ಕೇರಳದ ನರ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್ ಹಾಕಿದ ಇಲ್ಲಿನ ವೆಳ್ಳರಿಕುಂಡ್ ತಾಲ್ಲೂಕು ಕಚೇರಿಯ ಕಿರಿಯ ಅಧೀಕ್ಷಕ ಎ.ಪವಿತ್ರನ್ ಅವರನ್ನು ಕೇರಳದ ಕಂದಾಯ ಇಲಾಖೆ ಶುಕ್ರವಾರ ಅಮಾನತು ಮಾಡಿದೆ.
ದುರಂತದಲ್ಲಿ ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲ ಪಟ್ಟಣದ ಪುಲ್ಲಾಡ್ ನಿವಾಸಿ ರಂಜಿತಾ ನಾಯರ್ (40) ಮೃತರಾಗಿದ್ದರು. ಅವರಿಗೆ ಸಂತಾಪ ಸೂಚಿಸಿ ವ್ಯಕ್ತಿಯೊಬ್ಬರು ಹಾಕಿದ ಪೋಸ್ಟ್‌ಗೆ ಕಮೆಂಟ್ ಹಾಕಿದ್ದ ಪವಿತ್ರನ್ ರಂಜಿತಾ ಅವರ ಜಾತಿಯ ಬಗ್ಗೆ ಕೀಳಾಗಿ ಮತ್ತು ವ್ಯಕ್ತಿತ್ವದ ಬಗ್ಗೆ ಅಶ್ಲೀಲವಾಗಿ ಬರೆದಿದ್ದರು. ವಿವಾದ ಆಗುತ್ತಿದ್ದಂತೆ ಅದನ್ನು ಅಳಿಸಿ ಹಾಕಿದ್ದರು. ಆದರೆ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ತಾಣಗಳಲ್ಲಿ ಶೇರ್ ಆಗಿದ್ದವು.
ಇದನ್ನು ಗಮನಿಸಿ, ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಯಿತು. ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಕಂದಾಯ ಸಚಿವ ಕೆ.ರಾಜನ್ ‘ತಾಲ್ಲೂಕು ಕಚೇರಿಯ ಅಧಿಕಾರಿ ಮಾನಹಾನಿಕರ ಪೋಸ್ಟ್ ಹಾಕಿದ್ದಾರೆ. ಹೀಗಾಗಿ ತಕ್ಷಣವೇ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಅಧಿಕಾರಿಯ ವರ್ತನೆಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಚಿವರ ಪೋಸ್ಟ್‌ಗೆ ಉತ್ತರಿಸಿರುವ ಹಲವರು ಅಮಾನತು ಮಾಡಿದರೆ ಸಾಲದು, ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ‘ತಕ್ಷಣ ಕ್ರಮ ಕೈಗೊಂಡದ್ದು ಅಭಿನಂದನೀಯ. ಆದರೆ ಅರ್ಧ ವೇತನ ಪಡೆದುಕೊಂಡು ಮೋಜು ಮಾಡಿಕೊಂಡು ರಜೆಯಲ್ಲಿರುವಂತೆ ದಿನ ಕಳೆಯಲು ಇಂಥವರಿಗೆ ಇದೊಂದು ಅವಕಾಶ. ಆದ್ದರಿಂದ ಕೆಲಸದಿಂದಲೇ ತೆಗೆದುಹಾಕಬೇಕು’ ಎಂದು ಒಬ್ಬರು ಆಗ್ರಹಿಸಿದ್ದಾರೆ.
ಇಬ್ಬರು ಮಕ್ಕಳ ತಾಯಿ ರಂಜಿತಾ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು ಕೆಲಕಾಲ ಲಂಡನ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. ನಿರ್ಮಾಣ ಹಂತದಲ್ಲಿರುವ ಮನೆಯ ಅಂತಿಮ ಹಂತದ ಕೆಲಸಗಳನ್ನು ನೋಡಲು ಊರಿಗೆ ಬಂದ್ದಿದ್ದ ಅವರು ಲಂಡನ್‌ನಲ್ಲಿ ಕೆಲಸ ಮಾಡಿದ್ದರ ಪ್ರಮಾಣಪತ್ರಕ್ಕಾಗಿ ವಾಪಸ್ ಹೋಗುವಾಗ ದುರಂತ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.