ADVERTISEMENT

Ahmedabad Plane Crash: 1993ರ ಇಂಡಿಯನ್ ಏರ್‌ಲೈನ್ಸ್ ದುರಂತ ನೆನಪಿಸಿದ ಘಟನೆ

ಪಿಟಿಐ
Published 14 ಜೂನ್ 2025, 5:39 IST
Last Updated 14 ಜೂನ್ 2025, 5:39 IST
   

ಛತ್ರಪತಿ ಸಂಭಾಜಿನಗರ: ಉಳಿದ ಅವಶೇಷಗಳು, ಸುಟ್ಟ ಸ್ಥಿತಿಯಲ್ಲಿರುವ ಕಟ್ಟಡ, ಮಾತುಗಳಿಗೂ ದಕ್ಕದ ವಿಷಾದ, ಆಪ್ತರನ್ನು ಕಳೆದುಕೊಂಡವರಲ್ಲಿ ಮಡುಗಟ್ಟಿದ ನೋವು... ಭೀಕರ ವಿಮಾನ ಅಪಘಾತ ಸಂಭವಿಸಿದ ಅಹಮದಾಬಾದ್‌ನ ಬಿ.ಜೆ.ವೈದ್ಯ ಕಾಲೇಜು ಹಾಸ್ಟೆಲ್‌ ಸಂಕೀರ್ಣದ ಬಳಿ ಕಂಡುಬಂದ ಸ್ಥಿತಿ ಇದು. ಈ ಭೀಕರ ವಿಮಾನ ದುರಂತ 32 ವರ್ಷಗಳ ಹಿಂದೆ 55 ಜೀವಗಳನ್ನು ಬಲಿತೆಗೆದುಕೊಂಡ ಇಂಡಿಯನ್ ಏರ್‌ಲೈನ್ಸ್ ದುರಂತವನ್ನು ನೆನಪಿಸಿದೆ.

ಅಂದು(1993) ನಡೆದ ದುರಂತದಲ್ಲಿ ಬದುಕುಳಿದು ಮಹಾರಾಷ್ಟ್ರದ ಪರ್ಭಾನಿಯ ನಿವಾಸಿಯೊಬ್ಬರು ಇಂಡಿಯನ್ ಏರ್‌ಲೈನ್‌ ದುರಂತದ ಭೀಕರತೆ ಮತ್ತು ತಾವು ಅದರಿಂದ ಪಾರಾಗಿ ಬಂದ ಬಗ್ಗೆ ಸುದ್ದಿ ವಾಹಿನಿಯೊಂದರ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

1993ರ ಇಂಡಿಯನ್ ಏರ್‌ಲೈನ್ಸ್ ದುರಂತ:

1993ರ ಏಪ್ರಿಲ್ 26ರಂದು ಔರಂಗಾಬಾದ್-ಮುಂಬೈ ವಿಮಾನ 491, ರನ್‌ವೇನಲ್ಲಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು, ಬಳಿಕ ಹೊಲಕ್ಕೆ ಅಪ್ಪಳಿಸಿತ್ತು. ನತದೃಷ್ಟ ವಿಮಾನದಲ್ಲಿದ್ದ 112 ಪ್ರಯಾಣಿಕರಲ್ಲಿ 55 ಮಂದಿ ಮೃತಪಟ್ಟಿದ್ದರು.

ADVERTISEMENT

ಔರಂಗಾಬಾದ್ ಜಿಲ್ಲೆಯ (ಈಗ ಛತ್ರಪತಿ ಸಂಭಾಜಿನಗರ) ಚಿಕಲ್ತಾನಾ ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ವಿಮಾನದಲ್ಲಿ ಪರ್ಭಾನಿ ಜಿಲ್ಲೆಯ ಜಿಂತೂರು ಪುರಸಭೆ ಮಾಜಿ ಅಧ್ಯಕ್ಷ ವಸಂತ್ ಶಿಂದೆ ಇದ್ದರು.

ಶುಕ್ರವಾರ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿದ ವಸಂತ್ ಶಿಂದೆ, ದುರಂತದ ಭೀಕರತೆಯನ್ನು ವಿವರಿಸಿದ್ದಾರೆ. ಅದೃಷ್ಟವಶಾತ್‌ ಕಾಕ್‌ಪಿಟ್ ಬಳಿ ಕುಳಿತಿದ್ದರಿಂದ ದುರಂತದಿಂದ ಪಾರಾಗಿ ಬಂದಿದ್ದಾಗಿ ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಅಂದಿನ ಶಾಸಕ ರಾಮಪ್ರಸಾದ್ ಬೋರ್ಡಿಕರ್ ಮತ್ತು ನಾನು ಶರದ್ ಪವಾರ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈಗೆ ಹೋಗಬೇಕಿತ್ತು. ವಿಮಾನ ಟಿಕೆಟ್ ಸಿಗುತ್ತದೆ ಎಂದು ನಮಗೆ ಖಚಿತವಿರಲಿಲ್ಲ. ಆದರೆ ಪರ್ಭಾನಿಯ ಒಂದು ಕುಟುಂಬ ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿತ್ತು. ಆದ್ದರಿಂದ ನಮಗೆ ಸೀಟು ಸಿಕ್ಕಿತ್ತು.

ಬೋರ್ಡಿಕರ್ ಮತ್ತು ನನಗೆ ಹಿಂಭಾಗದಲ್ಲಿನ ಆಸನಗಳನ್ನು ನೀಡಲಾಗಿತ್ತು, ಆದರೆ ನಾವು ಕಾಕ್‌ಪಿಟ್ ಬಳಿ ಕುಳಿತುಕೊಳ್ಳುವುದಾಗಿ ಹೇಳಿದ್ದೆವು. ಅಲ್ಲಿ (ಕಾಕ್‌ಪಿಟ್‌ನ ಹತ್ತಿರ) ಕುಳಿತದ್ದು ನನ್ನ ಅದೃಷ್ಟ. ಇದರಿಂದ ನಾವು ಬಚಾವ್‌ ಆದೆವು. ಆದರೆ ಹಿಂಭಾಗದಲ್ಲಿದ್ದವರು ಬೆಂಕಿಯಲ್ಲಿ ಸುಟ್ಟು ಕರಕಲಾದರು ಎಂದು ಶಿಂದೆ ಅಂದಿನ ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಅಹಮದಾಬಾದ್‌ ವಿಮಾನ ದುರಂತ:

ಗುರುವಾರ ಮಧ್ಯಾಹ್ನ 1.39ರ ಸುಮಾರಿಗೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ. ವಿಮಾನದ 11ಎ ಸೀಟಿನಲ್ಲಿದ್ದ ವಿಶ್ವಾಸ್‌ ಕುಮಾರ್ ರಮೇಶ್‌ ಎಂಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ.

‘ನಾನು ಬದುಕಿದ್ದೇನೆ ಎಂದು ನಂಬುವುದಕ್ಕೆ ಆಗುತ್ತಿಲ್ಲ. ಒಂದರೆಕ್ಷಣ ನಾನು ಸಾಯುತ್ತೇನೆ ಎನಿಸಿತ್ತು. ಹೇಗೋ ಬದುಕಿದೆ. ಎಲ್ಲವೂ ಕ್ಷಣಾರ್ಧದಲ್ಲಿ ಆಯಿತು...’
ವಿಶ್ವಾಸ್‌ ಕುಮಾರ್ ರಮೇಶ್‌, ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.