ADVERTISEMENT

Air India ವಿಮಾನ ದುರಂತ: ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ವಿಶ್ವಾಸ್ ರಮೇಶ್

ಪಿಟಿಐ
Published 18 ಜೂನ್ 2025, 10:23 IST
Last Updated 18 ಜೂನ್ 2025, 10:23 IST
   

ದಿಯು: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬ್ರಿಟನ್‌ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್‌ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅದೇ ದುರಂತದಲ್ಲಿ ಮೃತಪಟ್ಟ ಸಹೋದರ ಅಜಯ್‌ ರಮೇಶ್‌ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬ್ರಿಟನ್‌ನಿಂದ ದಿಯುಗೆ ಬಂದಿದ್ದ ಸಹೋದರರು ಜೂನ್‌ 12ರಂದು ಮರಳಿ ಲಂಡನ್‌ಗೆ ಹೊರಟಿದ್ದರು. ಈ ವೇಳೆ ವಿಮಾನ ಅಪಘಾತ ಸಂಭವಿಸಿತ್ತು.

‘ವಿಶ್ವಾಸ್ ಅವರ ಕುಟುಂಬ ಈಗಾಗಲೇ ಬ್ರಿಟನ್‌ನಿಂದ ದಿಯುಗೆ ಆಗಮಿಸಿದೆ. ಮಂಗಳವಾರ ಸಂಜೆ 7.30ಕ್ಕೆ ವಿಶ್ವಾಸ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಡಿಎನ್‌ಎ ಪರೀಕ್ಷೆ ಮೂಲಕ ಅವರ ಸಹೋದರ ಅಜಯ್‌ ಅವರ ಮೃತದೇಹದ ಗುರುತು ಪತ್ತೆ ಮಾಡಿದ್ದು, ಬುಧವಾರ ಮುಂಜಾನೆ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ’ ಎಂದು ವೈದ್ಯ ರಾಕೇಶ್‌ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ದಿಯುವಿನಲ್ಲಿ ಬುಧವಾರ ಬೆಳಿಗ್ಗೆ ಅಜಯ್‌ ಅವರ ಅಂತ್ಯಕ್ರಿಯೆ ನಡೆದಿದ್ದು, ವಿಶ್ವಾಸ್ ಕೂಡ ಅಲ್ಲಿ ಹಾಜರಿದ್ದರು ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕಳೆದ ವಾರ(ಜೂ.12) ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ (ಎಐ–171) ವಿಮಾನವು ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲೇ ಪತನಗೊಂಡಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಮತ್ತು ವಿಮಾನ ಬಿದ್ದ ಕಟ್ಟಡದಲ್ಲಿದ್ದ 29 ಮಂದಿ ಮೃತಪಟ್ಟಿದ್ದಾರೆ. 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಅವರು ಪವಾಡಸದೃಶವಾಗಿ ಪಾರಾಗಿದ್ದರು.

ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಮಾತನಾಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.