ಸಿಕ್ಕಿಂನಲ್ಲಿ ಸಂಭವಿಸಿದ ಭೂಕುಸಿತ
ಪಿಟಿಐ ಚಿತ್ರ
ಕೋಲ್ಕತ್ತ: ಭಾರತೀಯ ಭೂಗರ್ಭ ಸರ್ವೇಕ್ಷಣಾ ಸಂಸ್ಥೆಯು (ಜಿಎಸ್‌ಐ) ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಭೂಕುಸಿತದ ಬಗ್ಗೆ ನಿಖರವಾಗಿ ಮುನ್ಸೂಚನೆ ನೀಡುವ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸುತ್ತಿದೆ.
ರಾಷ್ಟ್ರೀಯ ಭೂಕುಸಿತ ಮುನ್ಸೂಚನಾ ಕೇಂದ್ರದ (ಎನ್‌ಎಲ್‌ಎಫ್‌ಸಿ) ಮೊದಲ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ‘ಜಿಎಸ್‌ಐ’ ಮಹಾನಿರ್ದೇಶಕ ಅಸಿತ್ ಸಾಹ, ‘ಸುಧಾರಿತ ಭೂಕುಸಿತ ಮುನ್ಸೂಚನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಮುಂದುವರಿದಿವೆ. 2030ರ ವೇಳೆಗೆ ದೇಶದಾದ್ಯಂತ ಪ್ರಾದೇಶಿಕ ಭೂಕುಸಿತ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು (ಎಲ್‌ಇಡಬ್ಲ್ಯೂಎಸ್) ಕಾರ್ಯಗತಗೊಳಿಸುವ ಗುರಿಯನ್ನು ‘ಜಿಎಸ್‌ಐ’ ಹೊಂದಿದೆ’ ಎಂದರು.
ಭಾರತೀಯ ಭೂಗರ್ಭ ಸರ್ವೇಕ್ಷಣಾ ಸಂಸ್ಥೆಯು, ಶೀಘ್ರದಲ್ಲೇ ಎಐ ತಂತ್ರಜ್ಞಾನ ಬಳಸಿಕೊಂಡು ಉತ್ತರಾಖಾಂಡ್‌ನ ರುದ್ರಪ್ರಯಾಗ್ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ಭೂಕುಸಿತ ಮುನ್ಸೂಚನಾ ಪ್ರಕಟಣೆಗಳನ್ನು ಹೊರಡಿಸಲಿದೆ ಎಂದು ಅವರು ಹೇಳಿದರು.
‘ಎನ್‌ಎಲ್‌ಎಫ್‌ಸಿ’ಯ ಭೂಕುಸಿತ ಮುನ್ಸೂಚನಾ ಪ್ರಕಟಣೆ ಮೊದಲು 6 ರಾಜ್ಯಗಳ 16 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ 8 ರಾಜ್ಯಗಳ 21 ಜಿಲ್ಲೆಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಭೂಸಂಕೇತ್ ಪೋರ್ಟಲ್ ಮತ್ತು ಭೂಕ್ಷಲನ್ ಅಪ್ಲಿಕೇಷನ್‌ಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಸಾಹ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.