ಬೆಂಗಳೂರು: ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಡಿಸ್ಟೆನ್ಸ್ (ಮೇಲ್) ಯುದ್ಧವಿಮಾನ ‘ಎಫ್‌ಡಬ್ಲ್ಯೂಡಿ ಕಾಲಭೈರವ’ವನ್ನು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ತಯಾರಿಸಿದೆ. ಇದು ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಯುದ್ಧವಿಮಾನವಾಗಿದ್ದು, ದೇಶದ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ.
ಶುಕ್ರವಾರ ನಗರದಲ್ಲಿ ಯುದ್ಧವಿಮಾನ ಬಿಡುಗಡೆಯಾದ ಬಳಿಕ ಎಫ್‌ಡಬ್ಲ್ಯು ಡಿಎ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ತೇಜಸ್ಕಂದ ಮಾತನಾಡಿ, ‘ಭಾರತೀಯರ ನಂಬಿಕೆಯಲ್ಲಿ ಕಾಲದ ಪ್ರತೀಕವಾಗಿರುವ ‘ಕಾಲಭೈರವ’ನ ಹೆಸರನ್ನೇ ಈ ಯುದ್ಧವಿಮಾನಕ್ಕೆ ಇಡಲಾಗಿದೆ. ಸತತ 30 ಗಂಟೆ 3000 ಕಿ.ಮೀ. ದೂರ ಹಾರುವ ಸಾಮರ್ಥ್ಯವನ್ನು ‘ಕಾಲಭೈರವ’ ಹೊಂದಿದೆ’ ಎಂದು ವಿವರಿಸಿದರು.
ದಕ್ಷಿಣ ಏಷ್ಯಾದ ದೇಶವೊಂದರಿಂದ ₹218 ಕೋಟಿಯ (ನಿರ್ವಹಣೆ ಸೇರಿ ₹262 ಕೋಟಿ) ರಫ್ತು ಆದೇಶ ಸಿಕ್ಕಿದೆ. ಇದು ರಕ್ಷಣಾ ಸಂಶೋಧನೆ ಹಾಗೂ ತಯಾರಿಕಾ ಕ್ಷೇತ್ರದಲ್ಲಿ ಎಐ ಆಧಾರಿತ ಸಲಕರಣೆಗಳನ್ನು ತಯಾರಿಸುವ ವಿಶ್ವಾಸಾರ್ಹ ದೇಶವಾಗಿ ಭಾರತ ಅಭಿವೃದ್ಧಿ ಹೊಂದುತ್ತಿರುವುದರ ಪ್ರತೀಕ ಎಂದು ವಿಶ್ಲೇಷಿಸಿದರು.
ಆತ್ಮನಿರ್ಭರ ಭಾರತದ ದೂರದೃಷ್ಟಿಯೊಂದಿಗೆ ಸಿದ್ಧಗೊಂಡಿರುವ ಎಫ್‌ಡಬ್ಲ್ಯುಡಿ ಕಾಲಭೈರವ ಇ2ಎ2 (ಎಕನಾಮಿಕ್ ಆ್ಯಂಡ್ ಎಫಿಷಿಯೆಂಟ್ ಅಟಾನಮಸ್ ಏರ್‌ಕ್ರಾಫ್ಟ್) ಯುದ್ಧವಿಮಾನವು ವಿದೇಶಿ ನಿರ್ಮಿತ ಎಂಕ್ಯೂ-9 ರೀಪರ್‌ನಂತಹ ಪ್ರಿಡೇಟರ್-ಕ್ಲಾಸ್ ಯುದ್ಧವಿಮಾನದ ಕೇವಲ ಹತ್ತನೇ ಒಂದರಷ್ಟು ವೆಚ್ಚದಲ್ಲಿ ಸಿದ್ಧಗೊಂಡಿದೆ. ಉತ್ತಮ ಸಮರ ಸಾಮರ್ಥ್ಯದ ಜೊತೆಗೆ ಈ ಯುದ್ಧವಿಮಾನವು ಬಹುಕೋನಗಳಿಂದ ನಿಖರ ದಾಳಿ ನಡೆಸುವ ಹಾಗೂ ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಶಕ್ತಿ ಹೊಂದಿದೆ ಎಂದು ವಿವರಿಸಿದರು.
‘ಕಾಲಭೈರವ’ ವಿಶೇಷತೆ 6.5 ಮೀಟರ್ ಉದ್ದದ ರೆಕ್ಕೆಗಳನ್ನು ಹೊಂದಿದೆ. ಇಒಐಆರ್ ಕ್ಷಿಪಣಿ ಲೇಸರ್ ಗೈಡೆಡ್ ರಾಕೆಟ್ ಇಂಧನ ಸೇರಿ 91 ಕೆ.ಜಿ. ಪೇಲೋಡ್ ಇದೆ. 20 ಸಾವಿರ ಅಡಿ ಎತ್ತರಕ್ಕೆ. 3 ಸಾವಿರ ಕಿ.ಮೀ. ದೂರಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ. ಒಂದು ವಿದೇಶಿ ಪ್ರಿಡೇಟರ್ ಯುದ್ಧವಿಮಾನವನ್ನು ಖರೀದಿಸುವ ವೆಚ್ಚದಲ್ಲಿ ಹತ್ತು ಕಾಲಭೈರವ ಯುದ್ಧವಿಮಾನ ಖರೀದಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.