ನಾಗ್ಪುರ: ‘ಕೃಷಿ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಕ್ರಾಂತಿಕಾರಕ ಬದಲಾವಣೆ ತರಲಿದ್ದು, ಇದರಿಂದ ರೈತರ ಜೀವನ ಮಟ್ಟ ಸುಧಾರಿಸಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ದೇಶದಲ್ಲಿ 350ರಿಂದ 400 ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿವೆ. ಜೋಳದಿಂದ ಎಥೆನಾಲ್ ಉತ್ಪಾದಿಸುವುದರಿಂದ ರೈತರಿಗೆ ₹45 ಸಾವಿರ ಕೋಟಿಯಷ್ಟು ಆದಾಯ ಸಿಗುತ್ತಿದೆ. ಮೊದಲು ಜೋಳಕ್ಕೆ ಕ್ವಿಂಟಲ್‌ಗೆ ₹1,200 ದರ ಇತ್ತು. ಈಗ ಅದು ₹2,800ಕ್ಕೆ ಏರಿಕೆಯಾಗಿದೆ’ ಎಂದರು.
ದೇಶದಾದ್ಯಂತ ಶೇ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ–20) ಬಳಕೆ ಜಾರಿಯಿಂದ ಗಡ್ಕರಿ ಅವರ ಇಬ್ಬರು ಪುತ್ರರಿಗೆ ಲಾಭ ಆಗುತ್ತದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಬಿಪಿ–20‘ ವಿರೋಧಿಸುತ್ತಿರುವವರಿಗೆ ಬೇರೆಯದೇ ಕಾರಣಗಳಿವೆ’ ಎಂದರು.
ಎಥೆನಾಲ್ ವಿಷಯದಲ್ಲಿ ತಮ್ಮನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತ ಪ್ರಚಾರ ಮಾಡಲಾಗುತ್ತಿದೆ ಎಂದು ಗಡ್ಕರಿ ಗುರುವಾರ ಆರೋಪಿಸಿದ್ದರು.
ನಾಗ್ಪುರದಲ್ಲಿ ನವೆಂಬರ್ 21ರಿಂದ 24ರವರೆಗೆ ಗಡ್ಕರಿ ಮಾರ್ಗದರ್ಶನದಲ್ಲಿ ‘ಅಗ್ರೊವಿಷನ್–2025’ ಕೃಷಿ ಉಪಕರಣಗಳ ಪ್ರದರ್ಶನ ಮೇಳ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.