ಚೆನ್ನೈ: ‘ಡಿಎಂಕೆ ಯುವ ಘಟಕದ ಪದಾಧಿಕಾರಿಯೊಬ್ಬರು ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದು, ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
‘ವಿದ್ಯಾರ್ಥಿನಿ ವಿಚಾರದಲ್ಲಿ ಅರಕ್ಕೋಣಂ ಕ್ಷೇತ್ರದ ಎಐಎಡಿಎಂಕೆ ಶಾಸಕ ಎಸ್.ರವಿ ಅವರು ಮಧ್ಯಪ್ರವೇಶಿಸಿದ ನಂತರ ಆರೋಪಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ರಾಣಿಪೇಟ್ ಜಿಲ್ಲೆಯ ಅರಕ್ಕೋಣಂ ಕ್ಷೇತ್ರದ ಡಿಎಂಕೆ ಯುವ ಘಟಕದ ಪದಾಧಿಕಾರಿಯೊಬ್ಬರು ಕಿರುಕುಳ ನೀಡಿದ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಎಐಎಡಿಎಂಕೆ ಜೊತೆ ಸಂಬಂಧ ಹೊಂದಿದ್ದರು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿರಂತರ ಹೇಳಿಕೆ ನೀಡುತ್ತಿದ್ದರು. ನನ್ನ ಅಧಿಕಾರದ ಅವಧಿಯಲ್ಲಿ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪ್ರಾಮಾಣಿಕವಾಗಿ ಸಿಬಿಐ ತನಿಖೆಗೆ ಆದೇಶಿಸಿದ್ದೆನು. ಆದರೆ, ಅರಕ್ಕೋಣಂ ಪ್ರಕರಣವನ್ನು ಡಿಎಂಕೆ ಸರ್ಕಾರವು ಹಾದಿ ತಪ್ಪಿಸಲು ಯತ್ನಿಸುತ್ತಿದೆ’ ಎಂದು ಪಳನಿಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಆರೋಪಿಯ ವಿರುದ್ಧ ತಕ್ಷಣವೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜನರ ಸಹಕಾರದಿಂದ, ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು’ ಎಂದು ಡಿಎಂಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.