ADVERTISEMENT

ಎಐಎಡಿಎಂಕೆ ಜನರ ಚಳವಳಿ ಮಾತ್ರವಲ್ಲ, ಅವರ ಭಾವನೆಗಳ ಪ್ರತಿಬಿಂಬ: ಕೆ. ಪಳನಿಸ್ವಾಮಿ

ಪಕ್ಷದ 54ನೇ ವಾರ್ಷಿಕ ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅಭಿಮತ

ಪಿಟಿಐ
Published 17 ಅಕ್ಟೋಬರ್ 2025, 13:31 IST
Last Updated 17 ಅಕ್ಟೋಬರ್ 2025, 13:31 IST
ಎಡಪ್ಪಾಡಿ ಪಳನಿಸ್ವಾಮಿ–ಪಿಟಿಐ ಚಿತ್ರ
ಎಡಪ್ಪಾಡಿ ಪಳನಿಸ್ವಾಮಿ–ಪಿಟಿಐ ಚಿತ್ರ   

ಚೆನ್ನೈ: ‘1972ರಲ್ಲಿ ಎಂ.ಜಿ.ರಾಮಚಂದ್ರನ್‌ ಅವರು ಎಐಎಡಿಎಂಕೆ ಪಕ್ಷವನ್ನು ಸ್ಥಾಪಿಸುವ ವೇಳೆ ಜನರ ಚಳವಳಿ ಮಾತ್ರ ಆಗಿರಲಿಲ್ಲ, ಅವರ ಭಾವನೆಗಳನ್ನು ಪ್ರತಿಬಿಂಬಿಸಿತ್ತು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.

ತಮಿಳುನಾಡಿನಾದ್ಯಂತ ಪಕ್ಷದ 54ನೇ ವರ್ಷಾಚರಣೆಯ ಸಮಾರಂಭದ ಪ್ರಯುಕ್ತ ಕಾರ್ಯಕರ್ತರಿಗೆ ಈ ಸಂದೇಶ ನೀಡಿದ್ದಾರೆ. ‘ರಾಜ್ಯದ ಜನಸಾಮಾನ್ಯರ ಧ್ವನಿಯಾಗಿ ಪಕ್ಷದ ಕಾರ್ಯಕರ್ತರು ಮೊದಲು ಧ್ವನಿ ಎತ್ತುತ್ತಾರೆ. ತಮಿಳುನಾಡು ಜನರ ಧ್ವನಿಯಾಗಿ, ನಾಳೆ ನಾವು ಸರ್ಕಾರ ರಚಿಸುವ ಜವಾಬ್ದಾರಿ ಹೊಂದಿದ್ದು, ರಾಜ್ಯದ ಜನರನ್ನು ರಕ್ಷಿಸುವ ಕರ್ತವ್ಯ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

‘ಡಿಎಂಕೆ ಸರ್ಕಾರವು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಜನವಿರೋಧಿ ಸರ್ಕಾರವನ್ನು ಕಿತ್ತುಹಾಕಲು ರಾಜ್ಯದಾದ್ಯಂತ ನಾನು ನಡೆಸಲಿರುವ ರಾಜಕೀಯ ಸಭೆಗಳಲ್ಲಿಯೂ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕು’ ಎಂದು ‘ಎಕ್ಸ್‌’ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ADVERTISEMENT

‘ಅಮ್ಮ ಅವರ (ಜೆ.ಜಯಲಲಿತಾ) ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಅಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ರಾಜ್ಯವನ್ನು ನೂರು ವರ್ಷ ಮುನ್ನಡೆಸಲಿದೆ. ನಾಳೆಗಳು ನಮ್ಮದಾಗಿದ್ದು, ಎಐಎಡಿಎಂಕೆ ಶಾಶ್ವತವಾಗಿರಲಿದೆ’ ಎಂದು ಪಳನಿಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.