ADVERTISEMENT

ಎಂಬಿಎ, ಪಿಜಿಡಿಎಂ ಪ್ರವೇಶಕ್ಕೆ ಪದವಿ ಅಂಕಗಳೇ ಅರ್ಹತೆ

ಎಐಸಿಟಿಇ ಅನುಮತಿ: ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತ

ಪಿಟಿಐ
Published 24 ಆಗಸ್ಟ್ 2020, 10:02 IST
Last Updated 24 ಆಗಸ್ಟ್ 2020, 10:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಂಬಿಎ ಮತ್ತು ಪಿಜಿಡಿಎಂ ಕೋರ್ಸ್‌ಗಳಿಗೆ ಪದವಿಯಲ್ಲಿನ ಅರ್ಹತಾ ಪರೀಕ್ಷೆ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮತಿ ನೀಡಿದೆ.

ಕೋವಿಡ್‌–19 ಕಾರಣಕ್ಕೆ ಹಲವು ಪ್ರವೇಶ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದ ಕಾರಣ ಎಐಸಿಟಿಇ ಈ ಕ್ರಮ ಕೈಗೊಂಡಿದೆ.

ಈ ಸಡಿಲಿಕೆಯು 2020–21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಆದರೆ, ಪ್ರವೇಶ ಪರೀಕ್ಷೆಗೆ ಹಾಜರಾಗಿ ಅರ್ಹತೆ ಪಡೆದ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಬೇಕು. ಆಗ ಪದವಿಯಲ್ಲಿನ ಅಂಕಗಳನ್ನು ಪರಿಗಣಿಸುವುದಿಲ್ಲ. ಈ ಅಭ್ಯರ್ಥಿಯು ಪ್ರವೇಶಕ್ಕೆ ಅಗತ್ಯವಿರುವ ಕನಿಷ್ಠ ಅಂಕಗಳನ್ನು ಪದವಿ ಪರೀಕ್ಷೆಯಲ್ಲಿ ಪಡೆದಿರಬೇಕು ಎಂದು ತಿಳಿಸಿದೆ.

‘ಸಿಎಟಿ, ಸಿಎಂಎಟಿ, ಎಟಿಎಂಎ, ಎಂಎಟಿ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳು ಮತ್ತು ಆಯಾ ರಾಜ್ಯಗಳು ನಡೆಸುವ ಪ್ರವೇಶ ಪರೀಕ್ಷೆ ಮೂಲಕ ಎಂಬಿಎ ಅಥವಾ ಸ್ನಾತಕೋತ್ತರ ಡಿಪ್ಲೋಮಾ ಇನ್‌ ಮ್ಯಾನೇಜ್‌ಮೆಂಟ್‌ (ಪಿಜಿಡಿಎಂ) ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಆದರೆ, ಕೋವಿಡ್‌–19 ಕಾರಣಕ್ಕೆ ಹಲವು ರಾಜ್ಯಗಳು ಈ ಪ್ರವೇಶ ಪರೀಕ್ಷೆಗಳನ್ನು ನಡೆಸಿಲ್ಲ. ಈ ಪರೀಕ್ಷೆಗಳನ್ನು ಮುಂದೂಡಿರುವ ಬಗ್ಗೆ ಅಥವಾ ರದ್ದುಪಡಿಸುವ ಬಗ್ಗೆಯೂ ಸೂಚನೆಯನ್ನು ನೀಡಿಲ್ಲ’ ಎಂದು ಎಐಸಿಟಿ ಸದಸ್ಯ ಕಾರ್ಯದರ್ಶಿ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

‘ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದ ಬಳಿಕ ಪರ್ಯಾಯ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಯಿತು. ಇದರಿಂದ, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಪಾರದರ್ಶಕವಾಗಿ ಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬಹುದು’ ಎಂದು ತಿಳಿಸಿದ್ದಾರೆ.

‘ಪ್ರಸಕ್ತ ವರ್ಷದ ಸಡಿಲಿಕೆಯನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳು ಕೌನ್ಸೆಲಿಂಗ್‌ ಮೂಲಕವೂ ಸೀಟುಗಳನ್ನು ಭರ್ತಿ ಮಾಡಬಹುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.