ನವದೆಹಲಿ: ಪರ್ಯಾಯ ಹೂಡಿಕೆ ನಿಧಿಗಳಿಗೆ (ಎಐಎಫ್‌ಎಸ್) ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 9ರಂದು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಎಐಎಫ್‌ಎಸ್‌ನಿಂದ ಲಾಭ ಗಳಿಸುವ ಮೂಲ ಮಾಲೀಕರು ಮತ್ತು ಪೋರ್ಟ್‌ಫೋಲಿಯೊಗಳು, ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು ಮತ್ತು ದೇಶದಲ್ಲಿನ ಅವರ ಮಧ್ಯವರ್ತಿಗಳ ವಿವರವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವಿಕೆಯನ್ನು ಕಡ್ಡಾಯಗೊಳಿಸುವಂತೆ ಸೆಬಿಗೆ ನಿರ್ದೇಶಿಸಬೇಕು ಎಂದು ಕೋರಿ ಮಹುವಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ(ಸೆಬಿ) ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಏ. 1ರಂದು ಸೂಚಿಸಿತ್ತು.
ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು, ಅರ್ಜಿದಾರರು ಸೆಬಿಗೆ ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಸಂಸದರ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರನ್ನು ಪ್ರಶ್ನಿಸಿತು.
ಮೊಯಿತ್ರಾ ಅವರು ಮೇ 23ರಂದೇ ಸೆಬಿಗೆ ಅರ್ಜಿ ಸಲ್ಲಿಸಿದ್ದರು. ಸೆ.23ರಂದು ಸೆಬಿ ಉತ್ತರ ನೀಡಿದೆ. ಅದನ್ನು ದಾಖಲೆಯೊಂದಿಗೆ ಸಲ್ಲಿಸಲಾಗುವುದು ಎಂದು ಭೂಷಣ್ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.