ADVERTISEMENT

ಮೂವರು ಅಧಿಕಾರಿಗಳನ್ನು ಹೊಣೆಯಿಂದ ವಿಮುಕ್ತಿಗೊಳಿಸಲು ಏರ್ ಇಂಡಿಯಾಗೆ DGCA ಸೂಚನೆ

ಪಿಟಿಐ
Published 21 ಜೂನ್ 2025, 15:36 IST
Last Updated 21 ಜೂನ್ 2025, 15:36 IST
<div class="paragraphs"><p>ಏರ್ ಇಂಡಿಯಾ</p></div>

ಏರ್ ಇಂಡಿಯಾ

   

ಮುಂಬೈ: ವಿಮಾನ ಸಿಬ್ಬಂದಿಯ ಕರ್ತವ್ಯ ಅವಧಿಯ ಮಿತಿ (ಎಫ್‌ಡಿಟಿಎಲ್‌) ನಿಯಮ ಉಲ್ಲಂಘಿಸಿದ್ದಕ್ಕಾಗಿ ಟಾಟಾ ಸಮೂಹದ ಒಡೆತನದ ಏರ್‌ ಇಂಡಿಯಾ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನೋಟಿಸ್‌ ರವಾನಿಸಿದೆ.

ಮೇ 16 ಮತ್ತು 17ರಂದು ಬೆಂಗಳೂರು–ಲಂಡನ್‌ ಸಂಚರಿಸಿದ ವಿಮಾನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಎಫ್‌ಡಿಟಿಎಲ್‌ ನಿಗದಿಪಡಿಸಿದ 10 ಗಂಟೆಗಳ ಮಿತಿಗಿಂತ ಹೆಚ್ಚು ಕಾಲ ಸಿಬ್ಬಂದಿ ಕೆಲಸ ನಿರ್ವಹಿಸಿರುವುದು ತಿಳಿದುಬಂದಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ADVERTISEMENT

ಈ ಬಗ್ಗೆ ಏಳು ದಿನಗಳ ಒಳಗಾಗಿ ವಿವರಣೆ ನೀಡಬೇಕು ಎಂದು ಡಿಜಿಸಿಎ ಸೂಚಿಸಿದೆ. 

ಭವಿಷ್ಯದಲ್ಲಿ ಈ ರೀತಿ ನಿಯಮ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅದು ದಂಡ, ಪರವಾನಗಿ ಅಮಾನತು ಅಥವಾ ಕಾರ್ಯಾಚರಣೆ ಪರವಾನಗಿ ವಾಪಸಾತಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಎಚ್ಚರಿಸಿದೆ.

ಏರ್‌ ಇಂಡಿಯಾದ ಬೋಯಿಂಗ್‌ 787–8 ಡ್ರೀಮ್‌ಲೈನರ್‌ ವಿಮಾನವು ಅಹಮದಾಬಾದ್‌ನಲ್ಲಿ ಪತನಗೊಂಡು 270 ಮಂದಿ ಸಾವಿಗೆ ಕಾರಣವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ನಿರಂತರವಾಗಿ ಗಂಭೀರವಾದ ಉಲ್ಲಂಘನೆಗಳಾಗುತ್ತಿರುವುದಾಗಿ ಸ್ವತಃ ಏರ್‌ ಇಂಡಿಯಾ ಸಂಸ್ಥೆಯೇ ಬಹಿರಂಗಪಡಿಸಿದೆ. ವಾಯು ಮಾರ್ಗ ನಿರ್ವಹಣಾ ವ್ಯವಸ್ಥೆಯ (ಎಆರ್‌ಎಂಎಸ್‌) ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದು ತಿಳಿದುಬಂದಿದೆ ಎಂದು  ಡಿಜಿಸಿಎ ತಿಳಿಸಿದೆ.

ಎಆರ್‌ಎಂಎಸ್‌ ಎಂಬುದು ಸಿಬ್ಬಂದಿಯ ಪಾಳಿ ನಿಗದಿ, ವಿಮಾನಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸುವ ಸಾಫ್ಟ್‌ವೇರ್‌ ವೇದಿಕೆಯಾಗಿದೆ.

ಡಿಜಿಸಿಎ ಗುರುತಿಸಿದ ಪ್ರಮುಖ ಲೋಪಗಳು

  • ಸಿಬ್ಬಂದಿ ನಿಯೋಜನೆ, ಪಾಳಿ ನಿಗದಿಯಲ್ಲಿ ಲೋಪ‍

  • ಆಂತರಿಕ ಹೊಣೆಗಾರಿಕೆ ಇಲ್ಲದಿರುವುದು

  • ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳದಿರುವುದು

ಮೂವರ ವಿರುದ್ಧ ಕ್ರಮಕ್ಕೆ ಸೂಚನೆ

ಕರ್ತವ್ಯ ಲೋಪದ ಕಾರಣ ಏರ್‌ ಇಂಡಿಯಾದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಡಿಜಿಸಿಎ ಮತ್ತೊಂದು ನೋಟಿಸ್‌ ಮೂಲಕ ಸೂಚಿಸಿದೆ. ವಿಮಾನದ ಸಿಬ್ಬಂದಿಯ ನಿಯೋಜನೆ ಪಾಳಿಗಳ ನಿಗದಿಗೆ ಸಂಬಂಧಿಸಿದ ಎಲ್ಲ ರೀತಿಯ ಜವಾಬ್ದಾರಿಗಳಿಂದ ಈ ಮೂವರನ್ನು ವಿಮುಕ್ತಿಗೊಳಿಸುವಂತೆ ಆದೇಶಿಸಿದೆ. ವಿಭಾಗೀಯ ಉಪಾಧ್ಯಕ್ಷ ಚೂರಹ್‌ ಸಿಂಗ್ ಚೀಫ್‌ ಮ್ಯಾನೇಜರ್‌ ಪಿಂಕಿ ಮಿತ್ತಲ್‌ ಸಿಬ್ಬಂದಿ ನಿಯೋಜಕ ಪಾಯಲ್‌ ಅರೋರಾ ಅವರು ಲೋಪಗಳಿಗೆ ನೇರ ಹೊಣೆಗಾರರು ಎಂದು ಗುರುತಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ. ಈ ಮೂವರ ವಿರುದ್ಧ ಕೂಡಲೇ ಆಂತರಿಕ ಶಿಸ್ತುಕ್ರಮ ಜರುಗಿಸಬೇಕು. ಈ ಕುರಿತ ವರದಿಯನ್ನು 10 ದಿನಗಳ ಒಳಗಾಗಿ ಸಲ್ಲಿಸಬೇಕು ಎಂದೂ ಹೇಳಿದೆ. ಮುಂದಿನ ನೋಟಿಸ್‌ ನೀಡುವವರೆಗೆ ಈ ಮೂವರನ್ನು ವಿಮಾನದ ಸುರಕ್ಷತೆ ಮತ್ತು ಸಿಬ್ಬಂದಿ ನಿಯೋಜನೆಗೆ ನೇರವಾಗಿ ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಬಾರದು ಎಂದು ಸೂಚಿಸಿದೆ.

ಆದೇಶ ಅನುಷ್ಠಾನಕ್ಕೆ ಬದ್ಧ: ಏರ್‌ ಇಂಡಿಯಾ

ಡಿಜಿಸಿಎ ಆದೇಶವನ್ನು ವಿಮಾನಯಾನ ಸಂಸ್ಥೆಯು ಅನುಷ್ಠಾನಗೊಳಿಸಲಿದೆ. ಸುರಕ್ಷತಾ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ನಿಯಮಗಳನ್ನು ಜಾರಿಗೊಳಿಸಲು ಸಂಸ್ಥೆಯು ಬದ್ಧವಾಗಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ. ತಕ್ಷಣದಿಂದಲೇ ಕಂಪನಿಯ ಚೀಫ್‌ ಆಪರೇಷನ್‌ ಅಧಿಕಾರಿಯು ಸಮಗ್ರ ಕಾರ್ಯಾಚರಣೆ ಕೇಂದ್ರದ (ಐಒಸಿಸಿ) ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.