ನವದೆಹಲಿ: ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಗಿದ್ದ ಏರ್ ಇಂಡಿಯಾದ ಬೋಯಿಂಗ್ 787–8 ಡ್ರೀಮ್‌ಲೈನರ್ ವಿಮಾನದ ಕಪ್ಪುಪೆಟ್ಟಿಗೆಯಲ್ಲಿ ದಾಖಲಾಗಿದ್ದ ಅಡಕಗಳನ್ನು ಇಲ್ಲಿನ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಡೌನ್‌ಲೋಡ್ ಮಾಡಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದ್ದು, ವಿಮಾನದ ಕಾಕ್‌ಪಿಟ್ ಧ್ವನಿಗ್ರಾಹಕ (ಸಿವಿಆರ್) ಮತ್ತು ವಿಮಾನದ ಅಂಕಿಅಂಶ ಸಂಗ್ರಹಕಾರ (ಎಫ್‌ಡಿಆರ್)ನ ಮಾಹಿತಿ ವಿಶ್ಲೇಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿ ಎಂದು ಹೇಳಿದರು.
ಅವಘಡಕ್ಕೆ ಕಾರಣವಾಗಿರಬಹುದಾದ ಕಾರಣಗಳನ್ನು ತಿಳಿಯಲು ಹಾಗೂ ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ಕ್ರಮಗಳನ್ನು ವಹಿಸಲು ಈ ಮಾಹಿತಿಗಳು ಸಹಕಾರಿಯಾಗಲಿವೆ ಎಂದು ತಿಳಿಸಿದೆ.
ಜೂನ್ 13ರಂದು ಸಂಭವಿಸಿದ್ದ ಅಪಘಾತದಲ್ಲಿ ವಿಮಾನದಲ್ಲಿದ್ದ 241 ಜನರು ಮತ್ತು ವಿಮಾನ ಅಪ್ಪಳಿಸಿದ್ದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಸಂಕೀರ್ಣದಲ್ಲಿದ್ದ 34 ಜನರು ಅಸುನೀಗಿದ್ದರು. ಅವಶೇಷಗಳ ನಡುವೆ ಜೂನ್ 16ರಂದು ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು.
ಅಂತರರಾಷ್ಟ್ರೀಯ ಶಿಷ್ಟಾಚಾರದಂತೆ ವಿಮಾನ ಅಪಘಾತ ತನಿಖಾ ಮಂಡಳಿ (ಎಎಐಬಿ) ಪ್ರಧಾನ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ಇದರಲ್ಲಿ ವೈಮಾನಿಕ ಔಷಧ ತಜ್ಞ, ಎಟಿಸಿ ಅಧಿಕಾರಿ, ರಾಷ್ಟ್ರೀಯ ಸಂಚಾರ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಸದಸ್ಯರಿದ್ದಾರೆ.
ಬ್ಲ್ಯಾಕ್‌ಬಾಕ್ಸ್ ಅನ್ನು ವಾಯುಪಡೆ ವಿಮಾನದಲ್ಲಿ ನವದೆಹಲಿಗೆ ಪೂರ್ಣ ಭದ್ರತೆಯಲ್ಲಿ ಜೂನ್ 24ರಂದು ತರಲಾಗಿತ್ತು. ಅದೇ ದಿನ ಸಂಜೆ ಎಎಐಬಿ ಪ್ರಧಾನ ನಿರ್ದೇಶಕರ ನೇತೃತ್ವದ ತಾಂತ್ರಿಕ ಪರಿಣತರ ತಂಡವು ಅಂಕಿ ಅಂಶ ತೆಗೆಯುವ ಕಾರ್ಯ ಆರಂಭಿಸಿತ್ತು.
ಬ್ಲ್ಯಾಕ್‌ಬಾಕ್ಸ್‌ನಿಂದ ಪಡೆದ ಅಂಕಿ–ಅಂಶ, ಮಾಹಿತಿಗಳ ವಿಶ್ಲೇಷಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಗಳನ್ನು ದೇಶದ ಮತ್ತು ಅಂತರರಾಷ್ಟ್ರೀಯ ಕಾಯ್ದೆ ಮತ್ತು ನಿಬಂಧನೆಗಳಿಗೆ ಅನುಸಾರವಾಗಿಯೇ ಮಾಡಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.