ADVERTISEMENT

ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ಸುಪ್ರೀಂ ಕೋರ್ಟ್‌ಗೆ ದೂರುದಾರರ ಮೊರೆ

ಪಿಟಿಐ
Published 20 ಮಾರ್ಚ್ 2023, 11:14 IST
Last Updated 20 ಮಾರ್ಚ್ 2023, 11:14 IST
.
.   

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವ ದೂರುದಾರರು, ಇಂತಹ ಪ್ರಕರಣಗಳು ನಡೆದಾಗ ಯಾವ ರೀತಿ ವ್ಯವಹರಿಸಬೇಕೆಂದು ವಿಮಾನಯಾನ ಕಂಪನಿಗಳಿಗೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ರೂಪಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಏರ್ ಇಂಡಿಯಾ ಮತ್ತು ಡಿಜಿಸಿಎ ಈ ಪ್ರಕರಣದಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗಿರುವುದರಿಂದ ನ್ಯಾಯಾಲಯದ ಮೊರೆ ಹೋಗಿರುವುದಾಗಿ 72 ವರ್ಷದ ಮಹಿಳೆ ತಿಳಿಸಿದ್ದಾರೆ.

‘ಈ ವಿಚಾರವಾಗಿ ಮಾಧ್ಯಮಗಳು ಊಹೆಗಳ ಆಧಾರದಲ್ಲಿ ವರದಿ ಪ್ರಕಟಿಸಿರುವುದರಿಂದ ಸಂತ್ರಸ್ತೆಯ ಹಕ್ಕುಗಳಿಗೆ ಚ್ಯುತಿ ಬಂದಿದೆ. ಎಫ್‌ಐಆರ್‌ ಮತ್ತು ಸಾಕ್ಷಿಗಳ ಹೇಳಿಕೆಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದರಿಂದ ಮುಕ್ತ ಮತ್ತು ನ್ಯಾಯಯುತ ವಿಚಾರಣೆ ಮೇಲೆ ಅದು ಪರಿಣಾಮ ಬೀರಿದೆ’ ಎಂದೂ ಆರೋಪಿಸಿದ್ದಾರೆ.

ADVERTISEMENT

ಇಂತಹ ವಿಚಾರಗಳನ್ನು ವರದಿ ಮಾಡುವ ಮಾಧ್ಯಮಗಳಿಗೆ ನಿರ್ದಿಷ್ಟ ಮಾರ್ಗಸೂಚಿಯ ಕೊರತೆ ಇದೆ. ನ್ಯಾಯಾಲಯದಲ್ಲಿರುವ ಪ್ರಕರಣದ ಕುರಿತು ಮಾಧ್ಯಮಗಳು ದೃಢೀಕೃತವಲ್ಲದ ಹೇಳಿಕೆಗಳನ್ನು ಆಧರಿಸಿ ವರದಿ ಮಾಡುವುದರಿಂದ ಆರೋಪಿ ಮತ್ತು ಸಂತ್ರಸ್ತೆಯ ಮೇಲೆ ಪರಿಣಾಮ ಬೀಳುತ್ತದೆ ಎಂದೂ ಅವರು ಹೇಳಿದ್ದಾರೆ.

ಪ್ರಕರಣದ ಆರೋಪಿ ಶಂಕರ್‌ ಮಿಶ್ರಾ ಎಂಬಾತನಿಗೆ ದೆಹಲಿಯ ನ್ಯಾಯಾಲಯವು ಜನವರಿ 31ರಂದು ಜಾಮೀನು ಮಂಜೂರು ಮಾಡಿತ್ತು.

ಕಳೆದ ವರ್ಷದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮದ್ಯದ ಅಮಲಿನಲ್ಲಿದ್ದ ಆರೋಪಿ ಶಂಕರ್‌ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.