ADVERTISEMENT

ತೆರಿಗೆ ಸ್ವರ್ಗದಲ್ಲಿ ಅಜಿತ್‌ ದೋವಲ್‌ ಪುತ್ರನ ಹೆಡ್ಜ್‌ ಫಂಡ್‌ ಕಂಪನಿ!

ನೋಟು ರದ್ದಾದ ಕೆಲವೇ ದಿನಗಳಲ್ಲಿ ಕಂಪನಿ ನೋಂದಣಿ

ಏಜೆನ್ಸೀಸ್
Published 16 ಜನವರಿ 2019, 15:30 IST
Last Updated 16 ಜನವರಿ 2019, 15:30 IST
ವಿವೇಕ್‌ ದೋವಲ್‌ ಮತ್ತು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌
ವಿವೇಕ್‌ ದೋವಲ್‌ ಮತ್ತು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌    

ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಕಿರಿಯ ಪುತ್ರ, ವಿವೇಕ್‌ ದೋವಲ್‌ ತೆರಿಗೆ ಸ್ವರ್ಗವೆಂದು ಪರಿಗಣಿಸಲಾಗಿರುವ ಕೇಮನ್‌ ದ್ವೀಪದಲ್ಲಿ ಹೆಡ್ಜ್‌ ಫಂಡ್‌ ನಿರ್ವಹಿಸುತ್ತಿರುವ ಬಗ್ಗೆ ದಿ ಕ್ಯಾರವಾನ್‌ಮ್ಯಾಗಜೀನ್‌ ವರದಿ ಮಾಡಿದೆ.ಇಂಗ್ಲೆಂಡ್‌(ಯುಕೆ), ಅಮೆರಿಕ(ಯುಎಸ್‌), ಸಿಂಗಾಪುರ ಹಾಗೂ ಕೇಮನ್‌ ದ್ವೀಪಗಳಲ್ಲಿ ನಡೆದಿರುವ ವಹಿವಾಟು ದಾಖಲೆಗಳನ್ನು ಗಮನಿಸಿ ದಿ ಕ್ಯಾರವಾನ್‌ ಈ ವರದಿ ಸಿದ್ಧಪಡಿಸಿದೆ.

2016ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ₹1000 ಮತ್ತು ₹500 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ 13 ದಿನಗಳಲ್ಲಿ ಈ ಹೆಡ್ಜ್‌ ಫಂಡ್‌ ನೋಂದಣಿಯಾಗಿದೆ. ವಿವೇಕ್‌ ದೋವಲ್‌ ವ್ಯವಹಾರವು ಅವರ ಸಹೋದರ ಶೌರ್ಯ ದೋವಲ್‌(ಅಜಿತ್‌ ದೋವಲ್‌ ಅವರ ಮತ್ತೊಬ್ಬ ಪುತ್ರ) ಉದ್ಯಮದೊಂದಿಗೆ ಬೆಸೆದುಕೊಂಡಿದೆ. ಬಿಜೆಪಿ ರಾಜಕಾರಣಿ ಮುಖ್ಯಸ್ಥರಾಗಿರುವ ಚಿಂತಕರ ಚಾವಡಿ ’ಇಂಡಿಯಾ ಫೌಂಡೇಷನ್‌’ ಪ್ರಧಾನಿ ಮೋದಿ ಸರ್ಕಾರದೊಂದಿಗೆ ಆಪ್ತತೆ ಹೊಂದಿದ್ದು, ಶೌರ್ಯ ದೋವಲ್‌ ಈ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ವಿದೇಶಗಳಲ್ಲಿ ಬೇನಾಮಿ ಹೂಡಿಕೆ ಮತ್ತು ತೆರಿಗೆ ಸ್ವರ್ಗಗಳೆಂದು ಪರಿಗಣಿಸಲಾಗುವ ಸ್ಥಳಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿ ಕಪ್ಪು ಹಣ ಹೂಡಿಕೆಗಳನ್ನು ವಿರೋಧಿಸಿ ಅಜಿತ್‌ ದೋವಲ್‌ 2011ರಲ್ಲಿ ವರದಿ ಪ್ರಸ್ತುತ ಪಡಿಸಿದ್ದರು. ತೆರಿಗೆ ವಂಚನೆಗೆ ಕಾರಣವಾಗಿರುವ ಇಂಥ ಹೂಡಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಅಜಿತ್‌ ದೋವಲ್‌ ಸಾರ್ವಜನಿಕ ನಿಲುವು ತಳಿದಿದ್ದರು. ಆದರೆ, ಅವರ ಪುತ್ರ ವಿವೇಕ್‌ ದೋವಲ್‌ ವಿದೇಶದಲ್ಲಿ ಹೆಡ್ಜ್‌ ಫಂಡ್‌ ಮೂಲಕ ತೆರಿಗೆ ಉಳಿಸುವ ಉದ್ಯಮದಲ್ಲಿರುವುದು ಈಗ ಮುನ್ನೆಲೆಗೆ ಬಂದಿದೆ.

ಇಂಗ್ಲೆಂಡ್‌ ಪ್ರಜೆ, ಸಿಂಗಾಪುರ ವಾಸಿ ವಿವೇಕ್‌

ಚಾರ್ಟರ್ಡ್‌ ಫೈನಾನ್ಸಿಯಲ್‌ ಅನಾಲಿಸ್ಟ್‌ ಆಗಿರುವ ವಿವೇಕ್‌ ದೋವಲ್‌ ಇಂಗ್ಲೆಂಡ್‌ ಪೌರತ್ವ ಹೊಂದಿದ್ದು ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಜಿಎನ್‌ವೈ ಏಷ್ಯಾ ಫಂಡ್‌ ಹೆಸರಿನ ಹೆಡ್ಜ್‌ ಫಂಡ್‌ಗೆ ವಿವೇಕ್‌ ನಿರ್ದೇಶಕರಾಗಿದ್ದಾರೆ. 2018ರ ಜುಲೈನ ದಾಖಲೆಗಳ ಪ್ರಕಾರ, ಡಾನ್‌ ಡಬ್ಲ್ಯು ಇಬ್ಯಾಂಕ್ಸ್ ಮತ್ತು ಮೊಹಮದ್‌ ಅಲ್ತಾಫರ್ ಮುಸ್ಲಿಯಮ್‌ ವೀತಿಲ್‌ ಸಹ ಜಿಎನ್‌ವೈ ಏಷ್ಯಾ ಫಂಡ್‌ನ ನಿರ್ದೇಶಕರಾಗಿದ್ದಾರೆ.

ವಿದೇಶಗಳಲ್ಲಿ ಹೂಡಿಕೆಯಾಗಿರುವ ಹಣದ ಬಗ್ಗೆ ಸೋರಿಕೆಯಾದ 1.3 ಕೋಟಿ ದಾಖಲೆಗಳಪ್ಯಾರಡೈಸ್‌ ಪೇಪರ್ಸ್‌ ದತ್ತಾಂಶದಲ್ಲಿಯೂಡಾನ್‌ ಡಬ್ಲ್ಯು ಇಬ್ಯಾಂಕ್ಸ್ ಹೆಸರು ಪ್ರಸ್ತಾಪವಾಗಿದೆ. ಕೇಮನ್‌ ದ್ವೀಪದಲ್ಲಿ ನೋಂದಣಿಯಾಗಿರುವ ಎರಡು ಸಂಸ್ಥೆಗಳ ನಿರ್ದೇಶಕರಾಗಿ ಇಬ್ಯಾಂಕ್ಸ್‌ ಹೆಸರು ದಾಖಲಾಗಿದೆ. ಇಬ್ಯಾಂಕ್ಸ್ ಅವರು ಕೇಮನ್‌ ದ್ವೀಪದ ಸರ್ಕಾರದದೊಂದಿಗೆ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲಿನ ಸರ್ಕಾರದ ಆರ್ಥಿಕ ಕಾರ್ಯದರ್ಶಿ ಹಾಗೂ ಸಂಪುಟ ಸಚಿವರಿಗೆ ಸಲಹೆಗಾರರಾಗಿದ್ದರು.

ದೋವಲ್‌ ಸಹೋದರರ ಕಂಪನಿಗಳು ಮತ್ತು ವಹಿವಾಟು ಸಂಪರ್ಕ ಜಾಲ – ಚಿತ್ರ ಕೃಪೆ: ಕ್ಯಾರಾವಾನ್‌

ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌ನ ಪ್ರಾದೇಶಿಕ ನಿರ್ದೇಶಕ ಮೊಹಮದ್‌ ಅಲ್ತಾಫ್‌. ಪಶ್ಚಿಮ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಬೃಹತ್‌ ಮಳಿಗೆ(ಹೈ‍ಪರ್‌ಮಾರ್ಕೆಟ್ಸ್) ಉದ್ಯಮವನ್ನು ಲುಲು ಗ್ರೂಪ್‌ ನಿರ್ವಹಿಸುತ್ತಿದೆ. ದಾಖಲಾಗಿರುವ ಅಧಿಕೃತ ವಿಳಾಸ ಮಾಹಿತಿ ಪ್ರಕಾರ, ಜಿಎನ್‌ವೈ ಏಷ್ಯಾ ಫಂಡ್‌ ’ವಾಕರ್ಸ್‌ ಕಾರ್ಪೊರೇಟ್‌ ಲಿಮಿಟೆಡ್‌’ನ ಆಶ್ರಿತ ಸಂಸ್ಥೆಯಾಗಿದೆ. ವಾಕರ್ಸ್‌ ಕಾರ್ಪೊರೇಟ್‌ ಲಿಮಿಟೆಡ್‌ ಸಂಸ್ಥೆಯ ಹೆಸರು ಪ್ಯಾರಡೈಸ್‌ ಪೇಪರ್ಸ್‌ ಹಾಗೂ ಪನಾಮಾ ಪೇಪರ್ಸ್‌ ಸೋರಿಕೆಯಾದ ದತ್ತಾಂಶದಲ್ಲಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.