ADVERTISEMENT

ಕಿರುಕುಳ: ಎನ್‌ಸಿಪಿ -ಕಾಂಗ್ರೆಸ್‌ ನಡುವೆ ಆರೋಪ, ಪ್ರತ್ಯಾರೋಪ

ಪಿಟಿಐ
Published 23 ಜೂನ್ 2022, 17:30 IST
Last Updated 23 ಜೂನ್ 2022, 17:30 IST
ನಾನ ಪಟೋಲೆ
ನಾನ ಪಟೋಲೆ   

ಮುಂಬೈ: ಆಡಳಿತಾರೂಢ ಮಹಾವಿಕಾಸ ಆಘಾಡಿ (ಎಂವಿಎ) ಆಂತರಿಕ ಬಿಕ್ಕಟ್ಟಿನಿಂದ ನಲುಗಿರುವ ನಡುವೆಯೇ, ಮೈತ್ರಿಕೂಟದ ಅಂಗಪಕ್ಷಗಳಾದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಮುಖಂಡರ ನಡುವೆ ಆರೋಪ–ಪ್ರತ್ಯಾರೋಪಗಳು ಆರಂಭವಾಗಿವೆ.

ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು ಎನ್‌ಸಿಪಿಯ ಹಿರಿಯ ನಾಯಕ ಹಾಗೂ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಕಾರ್ಯವೈಖರಿಯನ್ನು ಗುರುವಾರ ಟೀಕಿಸಿದ್ದಾರೆ.

ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರ ಸೋದರಳಿಯ ಅಜಿತ್‌ ಪವಾರ್, ಎಂವಿಎ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಹಾಗೂ ಯೋಜನಾ ಖಾತೆ ಸಚಿವರಾಗಿದ್ದಾರೆ. ‘ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಅನುದಾನವನ್ನು ತಡೆಹಿಡಿಯುವ ಮೂಲಕ ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರಿಗೆ ಅಜಿತ್‌ ಪವಾರ್‌ ಕಿರುಕುಳ ನೀಡುತ್ತಿದ್ದಾರೆ’ ಎಂದು ಪಟೋಲೆ ಟೀಕಿಸಿದ್ದಾರೆ.

ADVERTISEMENT

‘ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಎನ್‌ಸಿಪಿ ಅನುದಾನ ನೀಡುತ್ತಿರಲಿಲ್ಲ’ ಎಂದು ಶಿವಸೇನಾದ ಬಂಡಾಯ ಶಾಸಕರ ಹೇಳಿಕೆಯನ್ನು ಪ್ರಸ್ತಾಪಿಸುವ ಮೂಲಕ ಪಟೋಲೆ ಈ ಟೀಕಾಪ್ರಹಾರ ನಡೆಸಿದ್ದಾರೆ.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಅಜಿತ್‌ ಪವಾರ್‌, ‘ನನ್ನ ಸ್ನೇಹಿತನ ಹೇಳಿಕೆ ಸತ್ಯಕ್ಕೆ ದೂರವಾದುದು. ಅವರು ಈ ರೀತಿ ಯಾಕೆ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

‘ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೂವರೆ ವರ್ಷಗಳ ಅವಧಿಯಲ್ಲಿ ನಿಯಮಿತವಾಗಿ 36 ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿದ್ದೇನೆ. ಎಂದಿಗೂ ಪಕ್ಷಪಾತ ಮಾಡಿಲ್ಲ. ನನ್ನ ಕಾರ್ಯವೈಖರಿಯೂ ನಿಮಗೆ ಗೊತ್ತು. ಅಲ್ಲದೇ, ಕಾನೂನು ಪ್ರಕಾರ ಯಾವುದೇ ಅನುದಾನವನ್ನು ತಡೆಹಿಡಿಯಲು ಸಾಧ್ಯವಿಲ್ಲ’ ಎಂದೂ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.